ಟುರಿನ್: ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳು ವ್ಯರ್ಥವಾದವು. ಯುವೆಂಟಸ್ ತಂಡ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನ ಪಂದ್ಯದಲ್ಲಿ ಶನಿವಾರ 2–1ರಿಂದ ಲಿಯೊನ್ ಎದುರು ಗೆದ್ದರೂ ಗೋಲು ಸರಾಸರಿ ಆಧಾರದಲ್ಲಿ ಲಿಯೊನ್ ತಂಡ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.
ಲೀಗ್‌ನಲ್ಲಿ ಉಳಿದುಕೊಳ್ಳಬೇಕಾದರೆ ಯುವೆಂಟಸ್ ತಂಡ ಈ ಹಣಾಹಣಿಯಲ್ಲಿ 3–1ರಿಂದ ಗೆಲ್ಲಬೇಕಿತ್ತು. ಆದರೆ ಎರಡು ಗೋಲುಗಳನ್ನು ಗಳಿಸಲಷ್ಟೇ ಅದು ಶಕ್ತವಾಯಿತು. ಸರಾಸರಿ ಆಧಾರದಲ್ಲಿ ಪಂದ್ಯ 2–2ರ ಸಮಬಲವಾಯಿತು. ಆದರೆ ಹಿಂದಿನ ಪಂದ್ಯಗಳಲ್ಲಿ ಎದುರಾಳಿಗೆ ಹೆಚ್ಚು ಗೋಲು ಬಿಟ್ಟುಕೊಟ್ಟ ಕಾರಣ ಯುವೆಂಟಸ್ ಟೂರ್ನಿಯಿಂದ ಹೊರಬೀಳಬೇಕಾಯಿತು.
ಲಿಯೊನ್ ತಂಡದ ನಾಯಕ ಮೆಂಫಿಸ್ ಡಿಪೇ 12ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿ ಮುನ್ನಡೆ ತಂದುಕೊಟ್ಟರು. 43ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯಲ್ಲಿ ಯಶಸ್ಸು ಕಂಡ ರೊನಾಲ್ಡೊ ಪಂದ್ಯ ಸಮಬಲವಾಗುವಂತೆ ಮಾಡಿದರು. ಈ ಮೂಲಕ ಟೂರ್ನಿಯಲ್ಲಿ ತಾವು ಗಳಿಸಿದ ಗೋಲುಗಳ ಸಂಖ್ಯೆಯನ್ನು 131ಕ್ಕೆ ಹೆಚ್ಚಿಸಿಕೊಂಡರು.
ಯುವೆಂಟಸ್ ತಂಡದ ಪರ ಅವರು ಗಳಿಸಿದ ಒಟ್ಟಾರೆ 37ನೇ ಗೋಲು ಇದಾಗಿತ್ತು. ಇದರೊಂದಿಗೆ 95 ವರ್ಷದ ದಾಖಲೆಯೊಂದನ್ನು ಅವರು ಮುರಿದರು. ಪಂದ್ಯದ 60ನೇ ನಿಮಿಷದಲ್ಲಿ ಮತ್ತೊಮ್ಮೆ ಕಾಲ್ಚಳಕ ತೋರಿದ ರೊನಾಲ್ಡೊ, ಸೊಗಸಾದ ಫೀಲ್ಡ್ ಗೋಲು ದಾಖಲಿಸಿದರು.
ಗಾಯದಿಂದ ಗುಣಮುಖರಾಗಿದ್ದ ಯುವೆಂಟಸ್ ತಂಡದ ಪ್ರಮುಖ ಫಾರ್ವರ್ಡ್ ಆಟಗಾರ ಪಾಲೊ ಡಿಬಾಲಾ ಈ ಪಂದ್ಯದ ದ್ವಿತೀಯಾರ್ಧದಲ್ಲಿ ಕಣಕ್ಕಿಳಿದರೂ 14 ನಿಮಿಷಗಳಲ್ಲಿ ಮತ್ತೆ ಅಂಗಣ ತೊರೆಯಬೇಕಾಯಿತು.
2015–16ರ ಋತುವಿನ ಬಳಿಕ ಯುವೆಂಟಸ್ ಟೂರ್ನಿಯಿಂದ ಇಷ್ಟು ಬೇಗ ನಿರ್ಗಮಿಸಿದ್ದು ಇದೇ ಮೊದಲು.
ಲಿಯೊನ್ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಎದುರಿಸಲಿದೆ.
ಮ್ಯಾಂಚೆಸ್ಟರ್ ಸಿಟಿಗೆ ಜಯ: ಮತ್ತೊಂದು ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡವು 2–1ರಿಂದ ರಿಯಲ್ ಮ್ಯಾಡ್ರಿಡ್ ಎದುರು ಜಯಭೇರಿ ಬಾರಿಸಿತು. 4–2ರ ಸರಾಸರಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿತು. ಮ್ಯಾಂಚೆಸ್ಟರ್ ಪರ ಸ್ಟರ್ಲಿಂಗ್ (9ನೇ ನಿಮಿಷ) ಹಾಗೂ ಜೇಸಸ್ (68ನೇ ನಿಮಿಷ) ಗೋಲು ಗಳಿಸಿದರು. ಮ್ಯಾಡ್ರಿಡ್ ತಂಡದ ಕರೀಂ ಬೆಂಜೆಮಾ 28ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.