ADVERTISEMENT

ಯುವೆಂಟಸ್‌ ಜಯದಲ್ಲಿ ಮಿಂಚಿದ ರೊನಾಲ್ಡೊ

ಏಜೆನ್ಸೀಸ್
Published 5 ಜುಲೈ 2020, 13:12 IST
Last Updated 5 ಜುಲೈ 2020, 13:12 IST
ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಎಡ) ಹಾಗೂ ಟೊರಿನೊ ತಂಡದ ಕೋಫಿ ಡಿಜ್ಜಿ (ಮಧ್ಯ) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು– ಎಎಫ್‌ಪಿ ಚಿತ್ರ
ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಎಡ) ಹಾಗೂ ಟೊರಿನೊ ತಂಡದ ಕೋಫಿ ಡಿಜ್ಜಿ (ಮಧ್ಯ) ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು– ಎಎಫ್‌ಪಿ ಚಿತ್ರ   

ಮಿಲಾನ್‌: ಪೋರ್ಚುಗಲ್‌ ಪ್ರತಿಭೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಫ್ರೀ ಕಿಕ್‌ನಲ್ಲಿ ಗಳಿಸಿದ ಗೋಲಿನ ಬಲದಿಂದ ಯುವೆಂಟಸ್‌ ತಂಡಸೀರಿ ‘ಎ’ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 4–1ರಿಂದ ಟೊರಿನೊ ತಂಡವನ್ನು ಮಣಿಸಿತು.

ವಿಜೇತ ತಂಡದ ಮೂರನೇ ಗೋಲು ಬಾರಿಸಿದ ರೊನಾಲ್ಡೊ ಈ ಋತುವಿನ ಲೀಗ್‌ನಲ್ಲಿ ಗಳಿಸಿದ ಗೋಲುಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಿಕೊಂಡರು. ಲಾಜಿಯೊ ತಂಡದ ಸಿರೊ ಇಮ್ಮೊಬಿಲ್‌ 29 ಗೋಲು ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲೇ ಪಾಲ್‌ ಡಿಬಾಲ್ (3ನೇ ನಿಮಿಷ) ಹಾಗೂ ಜುವಾನ್‌ ಕ್ವದ್ರಡೊ (29ನೇ ನಿಮಿಷ) ಗೋಲು ಗಳಿಸಿ ಯುವೆಂಟಸ್‌ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಆ್ಯಂಡ್ರಿಯೊ ಬೆಲೊಟ್ಟಿ ಪೆನಾಲ್ಟಿ ಕಿಕ್‌ನಲ್ಲಿ ತೋರಿದ ಕಾಲ್ಚಳಕ (45+6ನೇ ನಿಮಿಷ)ಟೊರಿನೊ ತಂಡದ ಮರುಹೋರಾಟದ ಸೂಚನೆ ನೀಡಿತ್ತು. ಆದರೆ 61ನೇ ನಿಮಿಷದಲ್ಲಿ ಮೋಡಿ ಮಾಡಿದ ರೊನಾಲ್ಡೊ, ಎಡಭಾಗದಿಂದ ಚೆಂಡನ್ನುಗೋಲುಪೆಟ್ಟಿಗೆಗೆ ಸೇರಿಸಿ ತಂಡದ ಗೆಲುವು ಖಚಿತಪಡಿಸಿದರು.

ADVERTISEMENT

3–1 ಮುನ್ನಡೆ ಪಡೆದ ಯುವೆಂಟಸ್‌ ತಂಡದ ಖಾತೆಗೆ 87ನೇ ನಿಮಿಷದಲ್ಲಿ ‘ಉಡುಗೊರೆ’ ರೂಪದಲ್ಲಿ ಮತ್ತೊಂದು ಗೋಲು ಸೇರಿತು. ಟೊರಿನೊ ಡಿಫೆಂಡರ್‌ ಕೋಫಿ ಡಿಡ್ಜಿ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡು ಹೊಡೆದರು.

ಈ ಜಯದೊಂದಿಗೆ ಯುವೆಂಟಸ್,‌ ಪಾಯಿಂಟ್ಸ್‌ ಪ‍ಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿರುವ ಲಾಜಿಯೊಗಿಂತ ಅದು ಏಳು ಪಾಯಿಂಟ್ಸ್‌ ಮುಂದೆ ಇದೆ.

ಯುವೆಂಟಸ್‌ ತಂಡದ ಗೋಲ್‌ಕೀಪರ್‌ ಜಿಯಾನ್‌ ಲ್ಯೂಗಿ ಬಫೊನ್‌ ಅವರಿಗೆ ಇದು 648ನೇ ಪಂದ್ಯವಾಗಿತ್ತು. ಈ ಮೂಲಕ ಅವರು ಸೀರಿ ಎ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಬರೆದರು. ಈ ಹಿಂದಿನ ದಾಖಲೆ ಎಸಿ ಮಿಲಾನ್‌ನ ಪಾಲೊ ಮಾಲ್ಡಿನಿ (647) ಹೆಸರಿನಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.