ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ, ಬ್ರೆಜಿಲ್‌ಗೆ ಭರ್ಜರಿ ಗೆಲುವು

ಎಎಫ್‌ಪಿ
Published 24 ಜುಲೈ 2023, 13:05 IST
Last Updated 24 ಜುಲೈ 2023, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್‌: ಅಲೆಕ್ಸಾಂಡ್ರಾ ಪೊಪ್‌ ಅವರು ಎರಡು ಗೋಲುಗಳ ನೆರವಿನಿಂದ ಜರ್ಮನಿ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಮೊರೊಕ್ಕೊ ತಂಡವನ್ನು ಸೋಮವಾರ 6–0 ಗೋಲುಗಳಿಂದ ಸದೆಬಡಿದು ಭರ್ಜರಿಯಾಗಿಯೇ ಆರಂಭ ಮಾಡಿತು. ಇಟಲಿ ತೀವ್ರ ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ಆರ್ಜೆಂಟಿನಾ ತಂಡವನ್ನು 1–0 ಗೋಲಿನಿಂದ ಸೋಲಿಸಿತು.

ಅರಿ ಬೋರ್ಗೆಸ್‌ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬ್ರೆಜಿಲ್‌, ಐದನೇ ದಿನದ ಕೊನೆಯ ಪಂದ್ಯದಲ್ಲಿ 4–0 ಗೋಲುಗಳಿಂದ ಮೊದಲ ಬಾರಿ ಆಡುತ್ತಿರುವ ಪನಾಮಾ ತಂಡಕ್ಕೆ ಸೋಲುಣಿಸಿತು. ‘ಎಫ್‌’ ಗುಂಪಿನ ಪಂದ್ಯದಲ್ಲಿ ಬೋರ್ಗೆಸ್‌ 19, 39 ಮತ್ತು 70ನೇ ನಿಮಿಷ ಗೋಲು ಗಳಿಸಿದರೆ, ಬೀಟ್ರಿಸ್‌ ಜನರೆಟ್ಟೊ 48ನೇ ನಿಮಿಷ ಗೋಲು ಗಳಿಸಿದರು.

ಎರಡು ಬಾರಿಯ ಚಾಂಪಿಯನ್‌ ಜರ್ಮನಿ, ಮಹಿಳಾ ಫುಟ್‌ಬಾಲ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ಅರಬ್‌ ರಾಷ್ಟ್ರವೆನಿಸಿರುವ ಮೊರೊಕ್ಕೊದಿಂದ ಹೆಚ್ಚು ಸವಾಲು ಎದುರಿಸಲಿಲ್ಲ. ಜರ್ಮನಿ ತಂಡದ ನಾಯಕಿ ಪೊಪ್‌, ಎದುರಾಳಿ ತಂಡದ ದುರ್ಬಲ ರಕ್ಷಣಾ ವಿಭಾಗದ ಲಾಭ ಪಡೆದು ಎರಡು ಗೋಲುಗಳನ್ನು ಗಳಿಸಿದರು. ಕ್ಲಾರಾ ಬುಯಲ್‌ ಮತ್ತು ಲಿಯಾ ಶುಲ್ಲರ್‌ ಇನ್ನೆರಡು ಗೋಲುಗಳಿಗೆ ಕಾರಣರಾದರು. ಇನ್ನೆರಡು, ‘ಉಡುಗೊರೆ’ ರೂಪದಲ್ಲಿ ಬಂದವು.

ADVERTISEMENT

ಜರ್ಮನಿ ಈ ಬಾರಿಯ ಟೂರ್ನಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

31,000 ಪ್ರೇಕ್ಷಕರೆದುರು ನಡೆದ ಪಂದ್ಯದಲ್ಲಿ ಇಟಲಿ ತಂಡ ನಿರ್ಣಾಯಕ ಗೋಲಿಗಾಗಿ 87ನೇ ನಿಮಿಷ ಕಾಯಬೇಕಾಯಿತು. ಸಬ್‌ಸ್ಟಿಟ್ಯೂಟ್‌ ಆಟಗಾರ್ತಿ ಕ್ರಿಸ್ಟಿಯಾನಾ ಗಿರೆಲಿ ನಾಲ್ಕು ನಿಮಿಷಗಳ ನಂತರ ಆಕರ್ಷಕ ಹೆಡರ್‌ ಮೂಲಕ ಈ ಗೋಲು ಗಳಿಸಿದರು. ಆರ್ಜೆಂಟೀನಾ ಮೂರು ಬಾರಿ ವಿಶ್ವಕಪ್‌ನಲ್ಲಿ ಆಡಿದರೂ ಒಮ್ಮೆಯೂ ಜಯ ದಾಖಲಿಸಿಲ್ಲ.

ಮಂಗಳವಾರದ ಪಂದ್ಯಗಳು: ಎಚ್‌ ಗುಂ‍ಪು: ದಕ್ಷಿಣ ಕೊರಿಯಾ– ಕೊಲಂಬಿಯಾ (ಸಿಡ್ನಿ), ‘ಎ’ ಗುಂಪು: ನ್ಯೂಜಿಲೆಂಡ್‌– ಫಿಲಿಪ್ಪೀನ್ಸ್‌ (ವೆಲಿಂಗ್ಟನ್‌), ‘ಎ’ ಗುಂಪು: ಸ್ವಿಟ್ಜರ್‌ಲೆಂಡ್‌– ನಾರ್ವೆ (ಹ್ಯಾಮಿಲ್ಟನ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.