ADVERTISEMENT

ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ನಿರಾಸೆ

ಸಂತೋಷ್ ಟ್ರೋಫಿ ಫುಟ್‌ಬಾಲ್: ನಾಳೆ ಪಂಜಾಬ್‌ ಸರ್ವಿಸಸ್‌ ಫೈನಲ್ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:06 IST
Last Updated 19 ಏಪ್ರಿಲ್ 2019, 19:06 IST
 ಕರ್ನಾಟಕ ಮತ್ತು ಸರ್ವಿಸಸ್ ನಡುವಿನ ಸೆಮಿಫೈನಲ್ ಪಂದ್ಯದ ಹಣಾಹಣಿಯ ರೋಚಕ ಕ್ಷಣ –ಟ್ವಿಟರ್ ಚಿತ್ರ
 ಕರ್ನಾಟಕ ಮತ್ತು ಸರ್ವಿಸಸ್ ನಡುವಿನ ಸೆಮಿಫೈನಲ್ ಪಂದ್ಯದ ಹಣಾಹಣಿಯ ರೋಚಕ ಕ್ಷಣ –ಟ್ವಿಟರ್ ಚಿತ್ರ   

ಲುಧಿಯಾನ: ಪೆನಾಲ್ಟಿ ಶೂಟೌಟ್‌ನಲ್ಲಿ ಎದುರಾಳಿಗಳಿಗೆ ಮಣಿದ ಕರ್ನಾಟಕ ತಂಡ ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.

ಇಲ್ಲಿನ ಗುರುನಾನಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸರ್ವಿಸಸ್‌ ತಂಡ 4–3ರಿಂದ ಮಣಿಸಿತು. 70ನೇ ನಿಮಿಷದಲ್ಲಿ ರೆಡ್‌ ಕಾರ್ಡ್ ಪಡೆದು ಆಶಿಕ್‌ ಹೊರನಡೆದದ್ದು ಕರ್ನಾಟಕದ ಪಾಲಿಗೆ ಭಾರಿ ಹಿನ್ನಡೆಯಾಯಿತು.

ನಿಗದಿತ ಅವಧಿ ಮುಗಿದಾಗ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶ ನಿರ್ಣಯಿಸಲು ಹೆಚ್ಚುವರಿ ಅರ್ಧ ತಾಸು ಒದಗಿಸಲಾಯಿತು. ಈ ಸಂದರ್ಭದಲ್ಲೂ ಗೋಲು ಗಳಿಸಲು ಎರಡೂ ತಂಡಗಳು ವಿಫಲವಾದವು. ಆದ್ದರಿಂದ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ADVERTISEMENT

ಏಳನೇ ನಿಮಿಷದಲ್ಲಿ ಲಾಲಾಕಿಮಾ ಗಳಿಸಿದ ಗೋಲಿನ ಮೂಲಕ ಸರ್ವಿಸಸ್ ಮುನ್ನಡೆ ಸಾಧಿಸಿತು. ತಿರುಗೇಟು ನೀಡಲು ಪ್ರಯತ್ನಿಸಿದ ಕರ್ನಾಟಕ ಫಲ ಕಾಣಲು 80ನೇ ನಿಮಿಷದ ವರೆಗೂ ಕಾಯಬೇಕಾಯಿತು. ನಿಖಿಲ್‌ ರಾಜ್ ಚೆಂಡನ್ನು ಗುರಿ ಮುಟ್ಟಿಸಿ ಕರ್ನಾಟಕದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಮುನ್ನಡೆ ಸಾಧಿಸಲು ನಡೆಸಿದ ಪ್ರಯತ್ನಗಳಿಗೆ ಫಲ ಸಿಗದಿದ್ದರೂ ಕರ್ನಾಟಕ ತಂಡ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದೆ ಸಮಾಧಾನಪಟ್ಟುಕೊಂಡಿತು.

ಚುರುಕಿನ ಪಾಸ್‌ಗಳ ಮೂಲಕ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಕರ್ನಾಟಕ ಆಕ್ರಮಣಕಾರಿ ಆಟಕ್ಕೂ ಒತ್ತು ನೀಡಿತು. ಹೀಗಾಗಿ ಸರ್ವಿಸಸ್‌ ತಬ್ಬಿಬ್ಬಾಯಿತು. ಆದರೆ ಏಳನೇ ನಿಮಿಷದಲ್ಲಿ ಲಭಿಸಿದ ಕ್ರಾಸ್‌ ಅನ್ನು ನಿಯಂತ್ರಿಸಿದ ಲಾಲಾಕಿಮಾ ನಿಖರವಾಗಿ ಚೆಂಡನ್ನು ಒದ್ದು ಗುರಿ ಮುಟ್ಟಿಸಿದರು.

ನಂತರವೂ ಕರ್ನಾಟಕ ಆಕ್ರಮಣವನ್ನು ಮುಂದುವರಿಸಿತು. ದ್ವಿತೀಯಾರ್ಧದಲ್ಲೂ ತಂಡದ ಆಟ ಕಳೆಗಟ್ಟಿತು. ಫಾರ್ವರ್ಡ್ ಆಟಗಾರ ಲಿಯಾನ್ ಆಗಸ್ಟಿನ್‌ ಅಮೋಘ ಆಟದ ಮೂಲಕ ಪ್ರೇಕ್ಷಕರ ಮನ ಮುದಗೊಳಿಸಿದರು.

60ನೇ ನಿಮಿಷದಲ್ಲಿ ಅವರು ಎದುರಾಳಿ ಆವರಣದಲ್ಲಿ ಪ್ರಬಲ ಆಕ್ರಮಣ ನಡೆಸಿದರು. ಆದರೆ ಗೋಲ್ ಕೀಪರ್‌ ವಿಷ್ಣು ವಿ.ಕೆ ಚೆಂಡನ್ನು ತಡೆದು ಸರ್ವಿಸಸ್ ಪಾಳಯ ನಿಟ್ಟುಸಿರು ಬಿಡುವಂತೆ ಮಾಡಿದರು.

ಆಶಿಕ್‌ಗೆ ರೆಡ್ ಕಾರ್ಡ್‌: 70ನೇ ನಿಮಿಷದಲ್ಲಿ ಅಖಿಲ್ ಎ.ಎಸ್‌ ಮಾಡಿದ ತಪ್ಪು ತಂಡಕ್ಕೆ ಆಘಾತ ತಂದಿತು. ರೆಡ್‌ ಕಾರ್ಡ್ ಪಡೆದ ಅವರು ಹೊರ ನಡೆದರು. ಆದರೆ ಫ್ರೀ ಕಿಕ್‌ನಲ್ಲಿ ಗೋಲು ಗಳಿಸಲು ಸರ್ವಿಸಸ್‌ಗೆ ಸಾಧ್ಯವಾಗಲಿಲ್ಲ. ಕರ್ನಾಟಕದ ಡಿಫೆಂಡರ್‌ ನಮ್ಗ್ಯಾಲ್‌ ಭೂಟಿಯಾ ಚೆಂಡನ್ನು ತಡೆದರು.

ನಿಗದಿತ ಅವಧಿ ಮುಗಿಯಲು ಆರು ನಿಮಿಷ ಬಾಕಿ ಇದ್ದಾಗ ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ನಿಖಿಲ್ ರಾಜ್‌ ಎದುರಾಳಿ ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿ ಗೋಲು ಗಳಿಸಿದರು.

ಪಂಜಾಬ್‌ ಫೈನಲ್‌ಗೆ
ಗೋವಾ ಎದುರು 2–1 ಗೋಲುಗಳಿಂದ ಗೆದ್ದ ಪಂಜಾಬ್‌ ಫೈನಲ್‌ಗೆ ಪ್ರವೇಶಿಸಿತು. ಭಾನುವಾರ ಸಂಜೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. 14 ಬಾರಿ ಟೂರ್ನಿಯ ಫೈನಲ್ ಪ್ರವೇಶಿಸಿದ್ದ ಪಂಜಾಬ್‌ ಶುಕ್ರವಾರ ಅಮೋಘ ಆಟವಾಡಿತು.

12ನೇ ನಿಮಿಷದಲ್ಲಿ ಜಸ್‌ಪ್ರೀತ್‌ ಗೋಲು ಗಳಿಸಿ ಪಂಜಾಬ್‌ಗೆ ಮುನ್ನಡೆ ಗಳಿಸಿಕೊಟ್ಟರು. 44ನೇ ನಿಮಿಷದಲ್ಲಿ ಜೋಕಿಮ್ ಅಬ್ರಾಂಚೆಸ್ ಗಳಿಸಿದ ಗೋಲಿನ ಮೂಲಕ ಗೋವಾ ಸಮಬಲ ಸಾಧಿಸಿತು. 90ನೇ ನಿಮಿಷದಲ್ಲಿ ಹರ್ಜಿಂದರ್ ಸಿಂಗ್ ಗೆಲುವಿನ ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.