ADVERTISEMENT

ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಜನಮನ ಗೆದ್ದ ಸೆನೆಗೆಲ್ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 15:38 IST
Last Updated 20 ಜೂನ್ 2018, 15:38 IST
ಸೆನೆಗಲ್-ಪೋಲೆಂಡ್ (ಕೃಪೆ: ಫೇಸ್‍ಬುಕ್)
ಸೆನೆಗಲ್-ಪೋಲೆಂಡ್ (ಕೃಪೆ: ಫೇಸ್‍ಬುಕ್)   

ಮಾಸ್ಕೊ: ವಿಶ್ವಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ತಮ್ಮ ತಂಡದ ಪಂದ್ಯ ಮುಗಿದ ನಂತರ ಕ್ರೀಡಾಂಗಣ ಸ್ವಚ್ಛಗೊಳಿಸಿ ಸೆನೆಗಲ್ ತಂಡದ ಅಭಿಮಾನಿಗಳು ಜನಮನ ಗೆದ್ದಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಸೆನೆಗಲ್ ತಂಡ ಪೋಲೆಂಡ್ ವಿರುದ್ಧಗೆಲುವು ಸಾಧಿಸಿತ್ತು. ಸ್ಪಾರ್ತಕ್ ಕ್ರೀಡಾಂಗಣದಲ್ಲಿ ನಡೆದ ‘ಎಚ್‌’ ಗುಂಪಿನ ಪಂದ್ಯದಲ್ಲಿ ಪೋಲೆಂಡ್‌ ತಂಡದ ಬಲಿಷ್ಠ ರಕ್ಷಣಾ ವಿಭಾಗವನ್ನು ಕಂಗೆಡಿಸಿದ ಸೆನೆಗಲ್‌ ತಂಡ ಪೋಲೆಂಡ್‍ನ್ನು 2-1 ಗೋಲುಗಳಿಂದ ಪರಾಭವಗೊಳಿಸಿತ್ತು.

ವಿಶ್ವಕಪ್‌ನಲ್ಲಿ ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದಾಗ ಸೆನೆಗಲ್‌ಗೆ ಪೋಲೆಂಡ್ ಒಮ್ಮೆಯೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಆದರೆ ಈ ಬಾರಿ 37ನೇ ನಿಮಿಷದಲ್ಲಿ ಥಿಯಾಗೊ ಸಿಯೊನೆಕ್‌ ಸೆನೆಗಲ್‍ ಪರ ಮೊದಲ ಗೋಲು ಬಾರಿಸಿದ್ದರು. ನಂತರ 60ನೇ ನಿಮಿಷದಲ್ಲಿ ಮಬಯೆ ನಿಯಾಂಗ್‌ ಗಳಿಸಿದ ಗೋಲಿನ ಮೂಲಕ ಸೆನೆಗಲ್ ಮುನ್ನಡೆ ಹೆಚ್ಚಿಸಿಕೊಂಡಿತು. 86ನೇ ನಿಮಿಷದಲ್ಲಿ ಕ್ರಚೊವಾಕ್, ಪೋಲೆಂಡ್‌ಗೆ ಸಮಾಧಾನಕರ ಗೋಲು ಗಳಿಸಿಕೊಟ್ಟರು.

ADVERTISEMENT

ಪೋಲೆಂಡ್ ವಿರುದ್ಧ ಸೆನೆಗಲ್ ವಿಜಯ ಸಾಧಿಸಿದಾಗ ಸಂಭ್ರಮಿಸಿದ ಅಭಿಮಾನಿಗಳು ಪಂದ್ಯ ಮುಗಿದು ಹೊರನಡೆಯುವ ಹೊತ್ತಿಗೆ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
ಎರಡನೇ ಬಾರಿ ವಿಶ್ವಕಪ್ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿ ಪೋಲೆಂಡ್ ವಿರುದ್ಧ ಗೆಲುವು ಸಾಧಿಸಿದ ಸೆನೆಗಲ್ ತಂಡದ ಆಟಗಾರರು ಮೆಚ್ಚುಗೆಗೆ ಪಾತ್ರರಾಗುತ್ತಿದ್ದಂತೆ, ಈ ತಂಡದ ಅಭಿಮಾನಿಗಳ ಸ್ವಚ್ಛತಾ ಕಾರ್ಯದ ಬಗ್ಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.