ADVERTISEMENT

ವಿಶ್ವಕಪ್: ಆಟಗಾರರ ಕಳುಹಿಸಲು ಕ್ಲಬ್‌ಗಳಿಗೆ ₹ 3,000 ಕೋಟಿ ಪರಿಹಾರ ನೀಡಲಿದೆ FIFA

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 3:30 IST
Last Updated 28 ಮಾರ್ಚ್ 2023, 3:30 IST
   

ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಆಟಗಾರರನ್ನು ಕಳುಹಿಸಿಕೊಡುವುದಕ್ಕಾಗಿ ಕ್ಲಬ್‌ಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಶೇ 70ರಷ್ಟು ಏರಿಕೆ ಮಾಡಲಾಗಿದೆ. 2026 ಹಾಗೂ 2030ರಲ್ಲಿ ನಡೆಯುವ ವಿಶ್ವಕಪ್‌ಗಳಿಗೆ ಆಟಗಾರರನ್ನು ಬಿಡುಗಡೆ ಮಾಡುವುದಕ್ಕಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆ ಫಿಫಾ, ಕ್ಲಬ್‌ಗಳಿಗೆ ₹ 3,000 ಕೋಟಿ (355 ಮಿಲಿಯನ್‌ ಡಾಲರ್‌) ಪಾವತಿಸಲಿದೆ ಎಂದು ಫಿಫಾ ಹಾಗೂ ಯುರೋಪಿಯನ್‌ ಕ್ಲಬ್‌ ಒಕ್ಕೂಟ (ಇಸಿಎ) ಸೋಮವಾರ ತಿಳಿಸಿವೆ.

ಆಟಗಾರರನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಕ್ಲಬ್‌ಗಳಿಗೆ ರಾಷ್ಟ್ರೀಯ ತಂಡಗಳ ಸ್ಪರ್ಧೆಯ ಆದಾಯದ ಪಾಲನ್ನು, ಕ್ಲಬ್‌ಗಳ ಹಿತ ರಕ್ಷಣಾ ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ. ಜೊತೆಗೆ ಅಂತರರಾಷ್ಟ್ರೀಯ ಪಂದ್ಯಾವಳಿ ವೇಳೆ ಆಟಗಾರರು ಗಾಯಗೊಂಡರೆ ಕ್ಲಬ್‌ಗಳಿಗೆ ರಕ್ಷಣೆ ನೀಡಲಾಗುತ್ತದೆ.

2018 ಹಾಗೂ 2022ರ ವಿಶ್ವಕಪ್‌ ಪಂದ್ಯಾವಳಿಗಳ ಸಂದರ್ಭ ಕ್ಲಬ್‌ಗಳಿಗೆ ಅಂದಾಜು ₹ 1,700 ಕೋಟಿ (209 ಮಿಲಿಯನ್‌ ಡಾಲರ್‌) ಪರಿಹಾರ ನೀಡಲಾಗಿತ್ತು.

ADVERTISEMENT

ಹಂಗೇರಿಯ ಬಡಾಪೆಸ್ಟ್‌ನಲ್ಲಿರುವ ಇಸಿಎ ಪ್ರಧಾನ ಕಚೇರಿಯಲ್ಲಿ ನವೀಕೃತ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು. 'ಮಹತ್ವದ ಈ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ಸಂತಸವಾಗಿದೆ' ಎಂದು ಇಸಿಎ ಅಧ್ಯಕ್ಷ ನಾಸರ್ ಅಲ್-ಖೇಲೈಫಿ ಹೇಳಿದ್ದಾರೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್‌ ಟೂರ್ನಿಯು 2026ರ ಜೂನ್‌ನಲ್ಲಿ ಆರಂಭವಾಗಲಿದೆ. 32 ತಂಡಗಳು ಪಾಲ್ಗೊಳ್ಳಲಿವೆ ಎಂದು ಫಿಫಾ ಈ ತಿಂಗಳ ಆರಂಭದಲ್ಲಿ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.