ADVERTISEMENT

ಇಂಡಿಯನ್ ಸೂಪರ್ ಲೀಗ್: ಕಾಲ್ಚೆಂಡಿನಾಟದಲ್ಲಿ ರೆಫರಿಗಳ ‘ಕೈ’ಚಳಕ!

ವಿಕ್ರಂ ಕಾಂತಿಕೆರೆ
Published 10 ನವೆಂಬರ್ 2019, 19:30 IST
Last Updated 10 ನವೆಂಬರ್ 2019, 19:30 IST
ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡದ ಆಟಗಾರ ರೆಫರಿ ಜೊತೆ ವಾಗ್ವಾದ ನಡೆಸಿದ ಸಂದರ್ಭ –ಪಿಟಿಐ ಚಿತ್ರ
ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡದ ಆಟಗಾರ ರೆಫರಿ ಜೊತೆ ವಾಗ್ವಾದ ನಡೆಸಿದ ಸಂದರ್ಭ –ಪಿಟಿಐ ಚಿತ್ರ   

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ನಿರ್ಣಾಯಕರ ಬಗ್ಗೆ ಹಿಂದಿನಿಂದಲೇ ಟೀಕೆಗಳು ಕೇಳಿಬರುತ್ತಿವೆ. ಈ ಬಾರಿ ಆರಂಭದಿಂದಲೇ ರೆಫರಿಗಳ ಗುಣಮಟ್ಟದ ಬಗ್ಗೆ ಸಂದೇಹ ಮೂಡುವಂಥ ನಿರ್ಣಯಗಳಿಗೆ ಪಂದ್ಯಗಳು ಸಾಕ್ಷಿಯಾಗಿದ್ದವು. ಎರಡೇ ವಾರಗಳಲ್ಲಿ ರೆಫರಿಗಳು ವಿವಿಧ ತಂಡಗಳ ಕೋಚ್‌ಗಳ ‘ರೆಡ್’ ಕಣ್ಣಿಗೆ ಗುರಿಯಾಗಿದ್ದರು.

ಇಂಡಿಯನ್ ಸೂಪರ್ ಲೀಗ್ (ಐಎಸ್ಎ‌ಲ್) ಫುಟ್‌ಬಾಲ್‌ಟೂರ್ನಿಯ ಆರನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಫುಟ್‌ಬಾಲ್ ಕ್ಲಬ್‌ಗೆ (ಬಿಎಫ್‌ಸಿ) ಮೊದಲ ಪಂದ್ಯ. ಸ್ಥಳ: ಬೆಂಗಳೂರಿನ ಕಂಠೀರವ ಕ್ರೀಡಾಂಗಣ. ನಾರ್ತ್ ಈಸ್ಟ್ ಯುನೈಟೆಡ್ ಎದುರಿನ ಪಂದ್ಯದ 43ನೇ ನಿಮಿಷ. ಉಭಯ ತಂಡಗಳು ಮುನ್ನಡೆಗಾಗಿ ಕಾದಾಡುತ್ತಿದ್ದ ಸಂದರ್ಭ. ಆತಿಥೇಯ ಬಿಎಫ್‌ಸಿ ತಂಡಕ್ಕೆ ಗೋಲು ಗಳಿಸುವ ಸುವರ್ಣಾವಕಾಶ ಒದಗಿ ಬಂದಿತ್ತು. ನಾಯಕ ಸುನಿಲ್ ಚೆಟ್ರಿ ಡ್ರಿಬಲ್ ಮಾಡಿ ತಂದುಕೊಟ್ಟ ಚೆಂಡನ್ನು ನಿಶು ಕುಮಾರ್ ಗಾಳಿಯಲ್ಲಿ ಚಿಮ್ಮಿಸಿದರು. ಆದರೆ ಗೋಲು ಪೆಟ್ಟಿಗೆಯ ಮುಂಭಾಗದಲ್ಲೇ ಇದ್ದ ಎದುರಾಳಿ ತಂಡದ ಹೀರಿಂಗ್ಸ್ ಕಾಯ್ ಅವರ ತೋಳಿಗೆ ಸೋಕಿದ ಚೆಂಡು ನೆಲ ಸ್ಪರ್ಷಿಸಿತು. ನಂತರ ನಾರ್ತ್ ಈಸ್ಟ್ ಆಟಗಾರರು ಹೊರಗೆ ಅಟ್ಟಿದರು. ಇದು ‘ಹ್ಯಾಂಡ್‌ಬಾಲ್‌’ ಆಗಿದ್ದುದರಿಂದ ಬಿಎಫ್‌ಸಿ ತಂಡದವರು ಮನವಿ ಸಲ್ಲಿಸಿದರು. ಆದರೆ ರೆಫರಿ ಪೂರಕವಾಗಿ ಸ್ಪಂದಿಸಲಿಲ್ಲ.

ಟಿವಿ ರಿಪ್ಲೇಯಲ್ಲಿ ಚೆಂಡು ಕೈಗೆ ಸೋಕಿದ್ದು ಸ್ಪಷ್ಟವಾಗಿದ್ದರೂ ಉದ್ದೇಶಪೂರ್ವಕವಲ್ಲದ ತಪ್ಪು ಎಂಬ ಸಬೂಬು ನೀಡಿ ಪಂದ್ಯವನ್ನು ಮುಂದುವರಿಸಲಾಯಿತು. ಕೊನೆಯಲ್ಲಿ ಬಿಎಫ್‌ಸಿ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ADVERTISEMENT

ಒಂದು ವಾರದ ನಂತರ ಗೋವಾದಲ್ಲಿ ನಡೆದ ಎಫ್‌ಸಿ ಗೋವಾ ಎದುರಿನ ಪಂದ್ಯದಲ್ಲೂ ಪ್ರಮಾದಗಳು ಕಂಡುಬಂದವು. ಮನ್ವೀರ್ ಸಿಂಗ್ ಅವರ ಗೋಲು ಗಳಿಸುವ ಪ್ರಯತ್ನಕ್ಕೆ ಲೈನ್ ಅಂಪೈರ್‌ಗಳು ಅಡ್ಡಿಯಾದರು. ಚೆಂಡು ಆನ್‌ಸೈಡ್ ನಲ್ಲಿದ್ದರೂ ಅಂಪೈರ್ ಆಫ್‌ಸೈಡ್ ಸಂಕೇತ ತೋರಿದ್ದರಿಂದ ಗೋಲು ದಾಖಲಾಗಲಿಲ್ಲ. ಈ ಪಂದ್ಯದ ಕೊನೆಯ ಹಂತ ಕುತೂಹಲಕಾರಿ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ಪಂದ್ಯ ಮುಕ್ತಾಯಗೊಳ್ಳಲು 40 ಸೆಕೆಂಡು ಬಾಕಿ ಇದ್ದಾಗಲೇ ರೆಫರಿ ಅಂತಿಮ ಸೀಟಿ ಮೊಳಗಿಸಿದರು. ಪಂದ್ಯ 1-1ರಲ್ಲಿ ಡ್ರಾ ಆದ ಸಮಾಧಾನದಲ್ಲಿ ಉಭಯ ತಂಡಗಳ ಆಟಗಾರರು ಹೊರನಡೆದರು. ಅಷ್ಟರಲ್ಲಿ ತಪ್ಪಿನ ಅರಿವಾದ ರೆಫರಿ ಆಟಗಾರರನ್ನು ವಾಪಸ್ ಕರೆದರು. ಆದರೆ ಅವರು ಅಗಲೇ ‘ಬಹಳ ದೂರ’ ತಲುಪಿದ್ದರು!

ಐಎಸ್‌ಎಲ್‌ನಲ್ಲಿ ಈ ಬಾರಿ ತಂಡಗಳು ಮತ್ತು ಆಟಗಾರರಿಗಿಂತ ಹೆಚ್ಚು ಸದ್ದು ಮಾಡಿದ್ದು ರೆಫರಿಗಳು. ಅವರು ನೀಡಿದ ಕೆಲವು ತೀರ್ಪುಗಳು ಫುಟ್‌ಬಾಲ್ ಪ್ರಿಯರನ್ನು ಅಚ್ಚರಿಗೊಳಿಸಿವೆ. ಕೋಚ್‌ಗಳು ಮತ್ತು ಫುಟ್‌ಬಾಲ್ ಪಂಡಿತರು ದೂಷಣೆ ಮಾಡುವಂತಾಗಿವೆ.

ಅಕ್ಟೋಬರ್ 20ರಂದು ನಡೆದಿದ್ದ ಉದ್ಘಾಟನಾ ಪಂದ್ಯವೇ ರೆಫರಿಗಳ ಕಳಪೆ ‘ಆಟ’ಕ್ಕೆ ಸಾಕ್ಷಿಯಾಗಿತ್ತು. ಆ ಪಂದ್ಯದಲ್ಲಿ ಎಟಿಕೆಗೆ ಪೂರಕವಾಗಿದ್ದ ಪೆನಾಲ್ಟಿಯನ್ನು ನಿಷೇಧಿಸಲಾಗಿತ್ತು. ಪಂದ್ಯದಲ್ಲಿ ಆತಿಥೇಯ ಕೇರಳ ಭರ್ಜರಿ ಜಯ ಗಳಿಸಿತ್ತು.ಅಕ್ಟೋಬರ್ 30ರಂದು ಚೆನ್ನೈಯಲ್ಲಿ ನಡೆದಿದ್ದ ಚೆನ್ನೈಯಿನ್ ಎಫ್‌ಸಿ ಮತ್ತು ಎಟಿಕೆ ನಡುವಿನ ಪಂದ್ಯದಲ್ಲಿ ಎಟಿಕೆ ಪರವಾಗಿ ಪೆನಾಲ್ಟಿ ನೀಡುವುದಕ್ಕೂ ರೆಫರಿ ನಿರಾಕರಿಸಿದ್ದರು. ಟಿವಿ ಮರುಪ್ರಸಾರದಲ್ಲಿ ಎದುರಾಳಿ ತಂಡದ ಆಟಗಾರ ‘ಪೆನಾಲ್ಟಿಗೆ ಅರ್ಹವಾದ’ ತಪ್ಪು ಎಸಗಿದ್ದು ಸ್ಪಷ್ಟವಾಗಿತ್ತು. ಮರುದಿನ ನಡೆದಿದ್ದ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಎದುರು ಎಫ್‌ಸಿ ಮುಂಬೈ ಸಿಟಿ ತಂಡಕ್ಕೆ ಪೆನಾಲ್ಟಿ ಅವಕಾಶವನ್ನು ಕರುಣಿಸಿದ ರೆಫರಿ ಆ ತಂಡದ ಸೋಲಿನ ಅಂತರ (2-4) ಕಡಿಮೆಯಾಗಲು ನೆರವಾಗಿದ್ದರು!

ಹೊಸಬರೇನಲ್ಲ

ಐಎಸ್‌ಎಲ್‌ನ ಆರನೇ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಣಾಯಕರು ಯಾರೂ ಹೊಸಬರಲ್ಲ. ಒಟ್ಟು 11 ಮಂದಿಯ ಪೈಕಿ 5 ಮಂದಿ ಮೊದಲ ಆವೃತ್ತಿಯಿಂದಲೇ ಐಎಸ್‌ಎಲ್‌ ತೀರ್ಪು ನೀಡುತ್ತಿದ್ದಾರೆ. ಒಂದೇ ವರ್ಷದ ಅನುಭವ ಇರುವವರು ಈ ಬಾರಿ ಒಬ್ಬರು ಮಾತ್ರ ಇದ್ದಾರೆ. ಲಕ್ಷಾಂತರ ವೀಕ್ಷಕರಿರುವ, ಸಾವಿರಾರು ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿರುವ ಟೂರ್ನಿಯಲ್ಲಿ ಅನುಭವಿಗಳು ಕೂಡ ತಪ್ಪು ನಿರ್ಣಯಗಳನ್ನು ನೀಡುತ್ತಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ನಿರ್ಣಾಯಕರ ಒಂದು ತಪ್ಪಿನಿಂದ ಪಂದ್ಯದ ಫಲಿತಾಂಶದಲ್ಲಿ ಏರುಪೇರಾಗುತ್ತದೆ ಮತ್ತು ತಂಡಗಳ ಭವಿಷ್ಯದ ಹಾದಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇದು ಗಂಭೀರ ಚರ್ಚೆಯ ವಿಷಯವಾಗಿದೆ. ಐಎಸ್‌ಎಲ್‌ನಲ್ಲಿ ವಿಎಆರ್ (ವಿಡಿಯೊ ಅಸಿಸ್ಟೆಂಟ್ ರೆಫರಿ) ಇಲ್ಲ. ತೀರ್ಪು ಮರುಪರಿಶೀಲನೆಗೆ ಅವಕಾಶ ಇದ್ದಿದ್ದರೆ ಕೆಲವು ಪಂದ್ಯಗಳ ಫಲಿತಾಂಶವೇ ಬದಲಾಗುತ್ತಿತ್ತು ಎಂಬ ಮಾತು ಅನೇಕರಿಂದ ಕೇಳಿ ಬಂದಿದೆ.

ರೆಫರಿಗಳು ಮತ್ತು ಲೈನ್‌ಮನ್‌ಗಳು ನೀಡುತ್ತಿರುವ ತೀರ್ಪುಗಳು ಅಚ್ಚರಿ ಮೂಡಿಸಿವೆ. ಪೆನಾಲ್ಟಿ ಅವಕಾಶಗಳಲ್ಲಿ ತಂಡಗಳಿಗೆ ಹೆಚ್ಚು ಬೇಸರವಾಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲೇನಾದರೂ ಇಂಥ ತೀರ್ಪುಗಳನ್ನು ನೀಡಿದ್ದು ಕಂಡು ಬಂದರೆ ಆ ರೆಫರಿ ಮತ್ತೆ ಎಂದಿಗೂ ಪ್ರಮುಖ ಲೀಗ್‌ಗಳಲ್ಲಿ ಕಾಣಿಸಿಕೊಳ್ಳಲಾರ. ಆದರೆ ಐಎಸ್‌ಎಲ್‌ನಲ್ಲಿ ತಪ್ಪೆಸಗಿದ ರೆಫರಿ ಒಂದೇ ವಾರದಲ್ಲಿ ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಾರೆಜಾನ್ ಗ್ರೆಗರಿ ಚೆನ್ನೈಯಿನ್ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.