ADVERTISEMENT

ಸೂಪರ್‌ ಡಿವಿಷನ್‌ಗೆ ಬಡ್ತಿ ಪಡೆದ ಸ್ಟ್ರೈಡ್‌ ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಸೂಪರ್‌ ಡಿವಿಷನ್‌ ಲೀಗ್‌ಗೆ ಅರ್ಹತೆ ಪಡೆದುಕೊಂಡ ಸಂಭ್ರಮದಲ್ಲಿ ಸ್ಟ್ರೈಡ್‌ ಸ್ಪೋರ್ಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡದ ಆಟಗಾರರು ಮತ್ತು ಕೋಚ್‌ ಸಿಬ್ಬಂದಿ
ಸೂಪರ್‌ ಡಿವಿಷನ್‌ ಲೀಗ್‌ಗೆ ಅರ್ಹತೆ ಪಡೆದುಕೊಂಡ ಸಂಭ್ರಮದಲ್ಲಿ ಸ್ಟ್ರೈಡ್‌ ಸ್ಪೋರ್ಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡದ ಆಟಗಾರರು ಮತ್ತು ಕೋಚ್‌ ಸಿಬ್ಬಂದಿ   

ಬೆಂಗಳೂರು: ಸ್ಟ್ರೈಡ್‌ ಎಫ್‌ಸಿ ತಂಡವು ಶುಕ್ರವಾರ ನಡೆದ ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 4–2ರಿಂದ ರೈಲು ಗಾಲಿ ಫ್ಯಾಕ್ಟರಿ ಎಫ್‌ಸಿ ತಂಡವನ್ನು ಮಣಿಸಿತು. ಅದರೊಂದಿಗೆ, ಲೀಗ್‌ನಲ್ಲಿ 13 ಪಂದ್ಯಗಳಿಂದ 34 ಪಾಯಿಂಟ್ಸ್‌ ಸಂಪಾದಿಸಿರುವ ಸ್ಟ್ರೈಡ್‌ ತಂಡವು ಸೂಪರ್‌ ಡಿವಿಷನ್‌ ಲೀಗ್‌ಗೆ ಬಡ್ತಿ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟ್ರೈಡ್‌ ತಂಡದ ಇಮ್ರಾನ್‌ ಖಾನ್‌ (10ನೇ ಹಾಗೂ 28ನೇ ನಿ.) ಅವಳಿ ಗೋಲು ಗಳಿಸಿ ಮಿಂಚಿದರೆ, ಯೋಹನ್‌ ಜೇಕಬ್‌ (16ನೇ ನಿ.) ಹಾಗೂ ಗಿನ್ನೈಥಂಗ್‌ ಗಾಂಗ್ಟೆ (60ನೇ ನಿ.) ತಲಾ ಒಂದು ಗೋಲು ಹೊಡೆದರು. ರೈಲು ಗಾಲಿ ಫ್ಯಾಕ್ಟರಿ ಕ್ಲಬ್‌ ತಂಡದ ರಾಜೇಶ್‌ (50ನೇ ನಿ.) ಹಾಗೂ ರೂಪೇಶ್‌ (82ನೇ ನಿ.) ದ್ವಿತೀಯಾರ್ಧದಲ್ಲಿ ಹೋರಾಟ ತೋರಿದರಾದರೂ, ಗೆಲುವು ದಕ್ಕಲಿಲ್ಲ. 

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟ್ರೈಡ್‌ ತಂಡವು ಲೀಗ್‌ನ ತನ್ನ ಕೊನೆಯ ಪಂದ್ಯದಲ್ಲಿ ಸ್ನೈಪರ್‌ ಎಫ್‌ಸಿ ತಂಡದ ವಿರುದ್ಧ ಡ್ರಾ ಮಾಡಿಕೊಂಡರೂ, ಎ ಡಿವಿಷನ್‌ನ ಚಾಂಪಿಯನ್‌ ಪಟ್ಟವನ್ನು ತನ್ನದಾಗಿಸಿಕೊಳ್ಳಲಿದೆ. ಬಿಟಿಎಂ ಫುಟ್‌ಬಾಲ್‌ ಕ್ಲಬ್‌ (29 ಅಂಕ; 13 ಪಂದ್ಯಗಳು) ಹಾಗೂ ಟೆಕ್ನಿಕೊ ಫುಟ್‌ಬಾಲ್‌ ಫೌಂಡೇಶನ್‌ (29 ಅಂಕ; 13 ಪಂದ್ಯಗಳು) ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ADVERTISEMENT

ಆದಾಯ ತೆರಿಗೆ ಇಲಾಖೆ ಎಫ್‌ಸಿ ತಂಡಕ್ಕೆ ಜಯ:

ಅಕ್ಷಯ್‌ ಕೆ.ಎಸ್‌. (45ನೇ ನಿ.) ಅವರು ಗಳಿಸಿದ ಗೋಲಿನ ನೆರವಿನಿಂದ ಆದಾಯ ತೆರಿಗೆ ಇಲಾಖೆ ಎಫ್‌ಸಿ ತಂಡವು ಎ ಡಿವಿಷನ್‌ ಲೀಗ್‌ನ ಮತ್ತೊಂದು ಪಂದ್ಯದಲ್ಲಿ ಸ್ನೈಪರ್‌ ಎಫ್‌ಸಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಬಿ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಅಥುಲ್‌ ಕೃಷ್ಣ ಪಿ.ಎ. ಅವರ ಹ್ಯಾಟ್ರಿಕ್‌ ಗೋಲುಗಳ (10ನೇ, 24ನೇ ಹಾಗೂ 71ನೇ ನಿ.) ನೆರವಿನಿಂದ ಎಡಿಇ ಫುಟ್‌ಬಾಲ್‌ ಕ್ಲಬ್‌ ತಂಡವು 6–4ರಿಂದ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಮೈಸೂರು ವಿಜಯನಗರ ಎಫ್‌ಸಿ ತಂಡದ ಜಿಷ್ಣು ದಾಸ್‌ (9ನೇ, 13ನೇ ಹಾಗೂ 51ನೇ ನಿ.) ಅವರು ಹ್ಯಾಟ್ರಿಕ್‌ ಗೋಲು ಗಳಿಸಿದರು. ಅವರ ಆಟದ ಬಲದಿಂದ ಮೈಸೂರು ವಿಜಯನಗರ ತಂಡವು 3–0ಯಿಂದ ಸೌತ್‌ ಇಂಡಿಯಾ ಎಫ್‌ಸಿ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.