ADVERTISEMENT

ಚೆಟ್ರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ: ಭಾರತ ತಂಡದ ಮುಖ್ಯ ಕೋಚ್ ಜಮೀಲ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 15:48 IST
Last Updated 17 ಆಗಸ್ಟ್ 2025, 15:48 IST
<div class="paragraphs"><p>ಸುನಿಲ್‌ ಚೆಟ್ರಿ</p></div>

ಸುನಿಲ್‌ ಚೆಟ್ರಿ

   

–ಎಕ್ಸ್‌ ಚಿತ್ರ

ಬೆಂಗಳೂರು: ಸುನಿಲ್ ಚೆಟ್ರಿ ಅವರಂತಹ ಮಹಾನ್ ಆಟಗಾರನನ್ನು ತಂಡದಿಂದ ಹೊರಗಿಡಲು ಯಾರೂ ಯೋಚಿಸುವುದಿಲ್ಲ. ಅವರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ ಎಂದು ಭಾರತ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಖಾಲೀದ್ ಜಮೀಲ್ ಹೇಳಿದ್ದಾರೆ. 

ADVERTISEMENT

ಸಿಎಎಫ್‌ಎ ನೇಷನ್ಸ್ ಕಪ್ ಫುಟ್‌ಬಾಲ್ ರಾಷ್ಟ್ರೀಯ ಶಿಬಿರಕ್ಕೆ ಶುಕ್ರವಾರ ಜಮೀಲ್ ಅವರು ಪ್ರಕಟಿಸಿರುವ ತಂಡದಲ್ಲಿ ಚೆಟ್ರಿಗೆ ಸ್ಥಾನ ನೀಡಿಲ್ಲ. ಆದ್ದರಿಂದ ಚೆಟ್ರಿ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಲು ಸ್ಥಾನ ಪಡೆಯುವ ಕುರಿತ ಅನುಮಾನಗಳು ವ್ಯಕ್ತವಾಗಿದ್ದವು. ಭಾನುವಾರ ಅವರು ಈ ಊಹಾಪೋಹಗಳಿಗೆ ತೆರೆಯೆಳೆದರು. 

ನೇಷನ್ಸ್ ಕಪ್ ಟೂರ್ನಿಯು ಇದೇ ತಿಂಗಳು ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನದಲ್ಲಿ ನಡೆಯಲಿದೆ. ಅದಕ್ಕಾಗಿ ನಡೆಯುವ ತರಬೇತಿ ಶಿಬಿರಕ್ಕಾಗಿ  35 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ.

‘ಈ ಶಿಬಿರದಲ್ಲಿ ಅವರು (ಚೆಟ್ರಿ) ಇಲ್ಲ. ಏಷ್ಯಾ ಕಪ್ ಕ್ವಾಲಿಫೈಯರ್‌ ಪೂರ್ವಭಾವಿಯಾಗಿ ಈ ಶಿಬಿರವು ನೆರವಾಗಲಿದೆ. ಕೆಲವು ಅಟಗಾರರಿಗೆ ಅವಕಾಶ ಒದಗಿಸಲಾಗುತ್ತಿದೆ.  ಚೆಟ್ರಿ ಅವರು ಸಿಂಗಪುರ ಎದುರು ಅಕ್ಟೋಬರ್ 9 (ತವರಿನಾಚೆ ) ಮತ್ತು ಅ.14ರಂದು (ತವರಿನಲ್ಲಿ) ನಡೆಯುವ ಏಷ್ಯನ್ ಕಪ್ ಕ್ವಾಲಿಫೈಯಿಂಗ್ ಪಂದ್ಯಗಳಿಗೆ ಮರಳುವರು’ ಎಂದು ಜಮೀಲ್ ಸ್ಪಷ್ಟಪಡಿಸಿದರು. 

‘ಸುನೀಲ್ ಅವರು ಭಾರತದ ಫುಟ್‌ಬಾಲ್ ಕ್ರೀಡೆಯ ದಂತಕತೆ. ಹಲವಾರು ಬಾರಿ ಅವರು ಆಡಿದ್ದನ್ನು ನೋಡಿರುವೆ. ಅವರು ನನ್ನ ಅತ್ಯಂತ ನೆಚ್ಚಿನ ಆಟಗಾರನೂ ಹೌದು. ಭಾರತದ ಫುಟ್‌ಬಾಲ್‌ ಆಟಗಾರರಿಗೆ ಆತ ಅನುಕರಣೀಯ ವ್ಯಕ್ತಿ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಜಮೀಲ್ ಹೇಳಿಕೆ ನೀಡಿದ್ದಾರೆ.

ನೇಸನ್ಸ್‌ ಕಪ್ ಟೂರ್ನಿಯಲ್ಲಿ ಭಾರತವು ಬಿ ಗುಂಪಿನಲ್ಲಿ ಆಡಲಿದೆ. ಸಹ ಆತಿಥ್ಯ ವಹಿಸಿರುವ ತಜಕಿಸ್ತಾನ (ಆ.29), ಇರಾನ್ (ಸೆ.1) ಮತ್ತು ಅಫ್ಗಾನಿಸ್ತಾನ (ಸೆ.4) ತಂಡಗಳನ್ನು ಎದುರಿಸಲಿದೆ.

ಮೂರನೇ ಸ್ಥಾನಕ್ಕಾಗಿ ಪಂದ್ಯ ಮತ್ತು ಫೈನಲ್ ಸೆ. 8ರಂದು ಕ್ರಮವಾಗಿ ಹಿಸೋರ್ ಮತ್ತು ತಾಷ್ಕೆಂಟ್‌ (ಉಜ್ಬೇಕಿಸ್ತಾನ) ನಲ್ಲಿ ನಡೆಯಲಿವೆ.

ಭಾನುವಾರ ನಡೆದ ರಾಷ್ಟ್ರೀಯ ಶಿಬಿರದ ತಾಲೀಮಿನಲ್ಲಿ 22 ಆಟಗಾರರು ಭಾಗವಹಿಸಿದ್ದರು. ಉಳಿದ 13 ಆಟಗಾರರು ಡುರಾಂಡ್ ಕಪ್ ಟೂರ್ನಿಯಲ್ಲಿ ತಮ್ಮ ಕ್ಲಬ್‌ಗಳನ್ನು ಪ್ರತಿನಿಧಿಸಲು ತೆರಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.