ADVERTISEMENT

ಫುಟ್‌ಬಾಲ್‌: ಸೋಲಿನಿಂದ ಪಾರಾದ ಎಎಸ್‌ಸಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 15:46 IST
Last Updated 2 ನವೆಂಬರ್ 2018, 15:46 IST
ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡದ ನಿಯಾಜ್‌ (ಬಿಳಿ ಪೋಷಾಕು) ಮತ್ತು ಎಎಸ್‌ಸಿ ತಂಡದ ಅಮಿತ್‌ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡದ ನಿಯಾಜ್‌ (ಬಿಳಿ ಪೋಷಾಕು) ಮತ್ತು ಎಎಸ್‌ಸಿ ತಂಡದ ಅಮಿತ್‌ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲು ಬಾರಿಸಿದ ಜೊತಿನ್‌ ಸಿಂಗ್‌, ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಎಎಸ್‌ಸಿ 2–2 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಡ್ರಾ ಮಾಡಿಕೊಂಡಿತು.

ಮೊದಲಾರ್ಧದಲ್ಲಿ ಡ್ರೀಮ್‌ ಯುನೈಟೆಡ್‌ ಎಫ್‌ಸಿ ಮಿಂಚಿತು. 14ನೇ ನಿಮಿಷದಲ್ಲಿ ನಿಯಾಜ್‌ ಗೋಲು ಬಾರಿಸಿ 1–0ರ ಮುನ್ನಡೆಗೆ ಕಾರಣರಾದರು. ನಂತರದ ಅವಧಿಯಲ್ಲಿ ಸಮಬಲದ ಪೈಪೋಟಿ ಕಂಡುಬಂತು.

ADVERTISEMENT

ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. 80ನೇ ನಿಮಿಷದಲ್ಲಿ ನಿಯಾಜ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. ನಿಗದಿತ ಅವಧಿಯ ಆಟ (90 ನಿಮಿಷ) ಮುಗಿದಾಗ ಡ್ರೀಮ್‌ ಯುನೈಟೆಡ್‌ 2–0ರಿಂದ ಮುನ್ನಡೆ ಹೊಂದಿತ್ತು.

ಹೆಚ್ಚುವರಿ ಅವಧಿಯಲ್ಲಿ ಜೊತಿನ್‌ ಮೋಡಿ ಮಾಡಿದರು. 90+2ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಇದರ ಬೆನ್ನಲ್ಲೇ (90+4ನೇ ನಿ.) ಮತ್ತೊಮ್ಮೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಚಾಲೆಂಜರ್ಸ್‌ಗೆ ಜಯ: ‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ಗೆದ್ದಿತು.ಚಾಲೆಂಜರ್ಸ್‌ 4–0 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿಜಯೀ ತಂಡದ ನದೀಮ್‌ ಎರಡು ಗೋಲು ದಾಖಲಿಸಿ ಮಿಂಚಿದರು. ಅರಿವು (13ನೇ ನಿಮಿಷ) ಮತ್ತು ಭರತ್‌ (65ನೇ ನಿ.) ತಲಾ ಒಂದು ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.