ADVERTISEMENT

ಪ್ರೇರಣೆ ನೀಡಿದ ಸಚಿನ್ ಮಾತುಗಳು: ಸಂದೇಶ್ ಜಿಂಗಾನ

ಪಿಟಿಐ
Published 31 ಮೇ 2020, 19:30 IST
Last Updated 31 ಮೇ 2020, 19:30 IST
ಸಂದೇಶ್ ಜಿಂಗಾನ
ಸಂದೇಶ್ ಜಿಂಗಾನ   

ನವದೆಹಲಿ: ತಾವು ಆರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ನಂತರ ಒಂದು ವಿಶ್ವಕಪ್ ಗೆಲುವಿನ ಸಿಹಿ ಸವಿಯಲು ಸಾಧ್ಯವಾಯಿತೆಂದು ಅವತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದರು. ಆ ಮಾತುಗಳೇ ತಮಗೆ ಪ್ರೇರಣೆಯಾದವು ಎಂದು ಇಂಡಿಯ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಪ್ರತಿನಿಧಿಸುವ ಸಂದೇಶ್ ಜಿಂಗಾನ ಹೇಳಿದ್ಧಾರೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಆಯೋಜಿಸಿದ್ದ ಫೇಸ್‌ಬುಕ್ ಸಂವಾದದಲ್ಲಿ ಮಾತನಾಡಿದ ಅವರು, ‘ಐಎಸ್‌ಎಲ್‌ನ ಮೊದಲ ಆವೃತ್ತಿಯ ಫೈನಲ್‌ನಲ್ಲಿ ನಾವು ಎಟಿಕೆ ವಿರುದ್ಧ ಸೋತಿದ್ದೆವು. ತೀವ್ರ ನಿರಾಶೆಗೊಂಡು ಕುಸಿದಿದ್ದೆವು. ಆಗ ಸಚಿನ್ ನಮ್ಮನ್ನುದ್ದೇಶಿಸಿ ಹೇಳಿದ್ದ ಮಾತು ಇಂದಿಗೂ ಮನದಲ್ಲಿದೆ. ಆರು ಬಾರಿ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ನಂತರ ಒಂದು ವಿಶ್ವಕಪ್ ಜಯಿಸಲು ಸಾಧ್ಯವಾಯಿತು. ನೀವು ಮೊದಲ ಸಲ ಸೋತಿದ್ದೀರಿ. ಅದಕ್ಕಾಗಿ ಇಷ್ಟೊಂದು ನಿರಾಶೆಗೊಳ್ಳುವ ಅವಶ್ಯಕತೆ ಇಲ್ಲ’ ಎಂದರು.

‘ಅವರ ಸಕಾರಾತ್ಮಕ ಮನೋಭಾವವು ನಮಗೆ ದಾರಿದೀಪ. ಅವರ ಸಮೀಪದಲ್ಲಿದ್ದಾಗ ನಮ್ಮಲ್ಲಿ ಹುರುಪು ಪುಟಿದೇಳುತ್ತದೆ. ಅವರ ಶಾಂತಚಿತ್ತ, ನಿಖರವಾದ ಮಾತುಗಳು ಮತ್ತು ವ್ಯಕ್ತಿತ್ವವೇ ನಮ್ಮೆಲ್ಲರಿಗೂ ದೊಡ್ಡ ಪಾಠ. ಅವರು ತಮ್ಮ ಆಟದಿಂದಷ್ಟೇ ಅಲ್ಲ. ಈ ಎಲ್ಲ ಗುಣಗಳಿಂದಲೂ ದಂತಕಥೆಯಾಗಿದ್ದಾರೆ’ ಎಂದು ಜಿಂಗಾನ್ ಹೇಳಿದ್ದಾರೆ.

ADVERTISEMENT

ಸಚಿನ್ ತೆಂಡೂಲ್ಕರ್ ಅವರು ಕೇರಳ ಬ್ಲಾಸ್ಟರ್ಸ್‌ ಫ್ರ್ಯಾಂಚೈಸ್‌ಗೆ ಆಗ ಸಹ ಮಾಲೀಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.