ಭಾರತ ತಂಡದ ಹೆಡ್ ಕೋಚ್ ಬಿಬಿಯಾನೊ ಫೆರ್ನಾಂಡಿಸ್
ಯುಪಿಯಾ (ಅರುಣಚಾಲ ಪ್ರದೇಶ): ಗೆಲುವಿನ ನಾಗಾಲೋಟದಲ್ಲಿರುವ ಭಾರತ ತಂಡವು ಭಾನುವಾರ ನಡೆಯಲಿರುವ ಸ್ಯಾಫ್ 19 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾರತ ಗುಂಪು ಹಂತದಲ್ಲಿ ಲಂಕಾ ತಂಡದ ಮೇಲೆ 8–0 ಯಿಂದ, ನೇಪಾಳ ತಂಡದ ಮೇಲೆ 4–0ಯಿಂದ ಮತ್ತು ಸೆಮಿಫೈನಲ್‌ನಲ್ಲಿ ಮಾಲ್ಡೀವ್ಸ್ ತಂಡದ ಮೇಲೆ 3–0 ಯಿಂದ ಜಯಗಳಿಸಿ ಆತ್ಮವಿಶ್ವಾಸದಲ್ಲಿದೆ. ಭಾನುವಾರದ ಫೈನಲ್ ಗೆದ್ದರೆ, ಭಾರತ ಪುರುಷರ ವಿಭಾಗದಲ್ಲಿ ಹತ್ತನೇ ಬಾರಿ ಸ್ಯಾಫ್ ಟೂರ್ನಿಯ ಕಿರೀಟ ಧರಿಸಿದಂತಾಗುತ್ತದೆ.
ಭಾರತ 15 ವರ್ಷ, 16 ವರ್ಷ, 17 ವರ್ಷದೊಳಗಿನವರ ವಿಭಾಗದಲ್ಲಿ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. 18, 19 ಮತ್ತು 20 ವರ್ಷದೊಳಗಿನವರ ವಿಭಾಗದಲ್ಲಿ ತಲಾ ಒಮ್ಮೆ ಚಾಂಪಿಯನ್ ಆಗಿದೆ. ಹೆಡ್ ಕೋಚ್ ಬಿಬ್ಲಿಯಾನೊ ಫೆರ್ನಾಂಡಿಸ್ ಮಾರ್ಗದರ್ಶನ ದಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸ್ಯಾಫ್ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ನಾಲ್ಕು ಬಾರಿ ಎದುರಾಳಿಗಳಾಗಿವೆ.
‘ನಾವು ಪಿಚ್‌ನಲ್ಲಿ ನಮ್ಮಿಂದಾದಷ್ಟು ಉತ್ತಮ ಪ್ರದರ್ಶನ ನೀಡುತ್ತೇವೆ. ಕಳೆದ ಮೂರು ಪಂದ್ಯಗಳ ರೀತಿ ಫೈನಲ್‌ನಲ್ಲೂ ಪ್ರೇಕ್ಷಕರಿಗೆ ಮೋಸವಾಗುವುದಿಲ್ಲ’ ಎಂದು ಫೆರ್ನಾಂಡಿಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.