ADVERTISEMENT

ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ ಅರ್ಹತಾ ಟೂರ್ನಿ: ‘ಬಿ’ ಗುಂಪಿನಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
   

ನವದೆಹಲಿ: ಭಾರತ ತಂಡವು, ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿ ಅರ್ಹತಾ ಸುತ್ತಿನಲ್ಲಿ ‘ಬಿ’ ಗುಂಪಿನಲ್ಲಿದೆ. ಗುರುವಾರ ‘ಡ್ರಾ’ ನಡೆದಿದ್ದು, ಭಾರತದ ಜೊತೆ ಥಾಯ್ಲೆಂಡ್‌, ಮಂಗೋಲಿಯಾ, ತಿಮೋರ್‌ ಲೆಸ್ತೆ ಮತ್ತು ಇರಾಕ್ ತಂಡಗಳೂ ಇದೇ ಗುಂಪಿನಲ್ಲಿವೆ.

ಕ್ವಾಲಾಲಂಪುರದ ಎಎಫ್‌ಸಿ ಹೌಸ್‌ನಲ್ಲಿ  ‘ಡ್ರಾ’ ಪ್ರಕ್ರಿಯೆ ನಡೆಯಿತು. ಥಾಯ್ಲೆಂಡ್‌, ಜೂನ್‌ 23 ರಿಂದ ಜುಲೈ 5ರವರೆಗೆ ನಡೆಯುವ ‘ಬಿ’ ಗುಂಪಿನ ಅರ್ಹತಾ ಪಂದ್ಯಗಳ ಆತಿಥ್ಯ ವಹಿಸಲಿದೆ. ಸಿಂಗಲ್ ರೌಂಡ್‌ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಗುಂಪಿನ ವಿಜೇತರು ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಫೈನಲ್ ಮಾರ್ಚ್‌ 1 ರಿಂದ 26ರವರೆಗೆ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಅಲ್ಲಿನ ಮೂರು ನಗರಗಳಲ್ಲಿ ನಡೆಯಲಿವೆ. ತಂಡಗಳನ್ನು, ಮಾರ್ಚ್‌ 6ರಂದು ಪ್ರಕಟಿಸಲಾಗಿದ್ದ ಫಿಫಾ ರ್‍ಯಾಂಕಿಂಗ್‌ಗೆ ಅನುಗುಣವಾಗಿ ಐದು ಗುಂಪುಗಳಲ್ಲಿ ವಿಂಗಡಿಲಾಗಿದೆ.

2022ರಲ್ಲಿ ಚೀನಾ ಚಾಂಪಿಯನ್, ದಕ್ಷಿಣ ಕೊರಿಯಾ ರನ್ನರ್ ಅಪ್ ಆಗಿತ್ತು. ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಮೊದಲ ಆರು ಸ್ಥಾನ ಗಳಿಸುವ ತಂಡಗಳು, ಬ್ರೆಜಿಲ್‌ನಲ್ಲಿ 2027ರಲ್ಲಿ ನಡೆಯಲಿರುವ ಫಿಫಾ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.