ADVERTISEMENT

ಫಿಫಾ ವಿಶ್ವಕಪ್‌: ಕತಾರ್‌ಗೆ ಕಡೆಯ ಅವಕಾಶ, ಸೆನೆಗಲ್‌ ವಿರುದ್ಧ ಗೆಲುವು ಅನಿವಾರ್ಯ

ಏಜೆನ್ಸೀಸ್
Published 24 ನವೆಂಬರ್ 2022, 11:02 IST
Last Updated 24 ನವೆಂಬರ್ 2022, 11:02 IST
ಕತಾರ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಕತಾರ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ಕತಾರ್‌ ತಂಡ ಫಿಫಾ ವಿಶ್ವಕಪ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಶುಕ್ರವಾರ ಸೆನೆಗಲ್‌ ವಿರುದ್ಧ ಪೈಪೋಟಿ ನಡೆಸಲಿದೆ. ಲೀಗ್‌ ಹಂತದಲ್ಲೇ ಹೊರಬೀಳುವುದರಿಂದ ಪಾರಾಗಲು ಆತಿಥೇಯರಿಗೆ ಗೆಲುವು ಅನಿವಾರ್ಯ.

ಕತಾರ್‌ ‘ಎ’ ಗುಂ‍ಪಿನ ಮೊದಲ ಪಂದ್ಯದಲ್ಲಿ 0–2 ರಲ್ಲಿ ಈಕ್ವೆಡಾರ್‌ ಕೈಯಲ್ಲಿ ಸೋತಿತ್ತು. ಮಾತ್ರವಲ್ಲ, ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ಮೊದಲ ಆತಿಥೇಯ ರಾಷ್ಟ್ರ ಎನಿಸಿಕೊಂಡಿತ್ತು.

ದಕ್ಷಿಣ ಆಫ್ರಿಕಾ (2010) ತಂಡ ಹೊರತುಪಡಿಸಿ ಯಾವುದೇ ಆತಿಥೇಯ ರಾಷ್ಟ್ರ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲೇ ಹೊರಬಿದ್ದಿಲ್ಲ. ಅಂತಹ ಅವಮಾನದಿಂದ ಪಾರಾಗಲು ಶುಕ್ರವಾರ ಗೆಲುವು ಅಗತ್ಯ. ಆದರೆ ಆಫ್ರಿಕನ್‌ ಚಾಂಪಿಯನ್‌ ಸೆನೆಗಲ್‌ ವಿರುದ್ಧ ಜಯ ಸುಲಭವಲ್ಲ ಎಂಬುದರ ಅರಿವು ಕತಾರ್‌ಗೆ ಇದೆ.

ADVERTISEMENT

ಒಮ್ಮೆಯೂ ವಿಶ್ವಕಪ್‌ಗೆ ಅರ್ಹತೆ ಪಡೆಯದ ರಾಷ್ಟ್ರಕ್ಕೆ ಟೂರ್ನಿಯ ಆತಿಥ್ಯ ನೀಡಿದ್ದ ಫಿಫಾ ನಿರ್ಧಾರವನ್ನು ಈಗಾಗಲೇ ಹಲವರು ಟೀಕಿಸಿದ್ದಾರೆ. ಲೀಗ್‌ ಹಂತದಲ್ಲೇ ಹೊರಬಿದ್ದರೆ ಈ ಟೀಕೆ ಇನ್ನಷ್ಟು ಹೆಚ್ಚಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂಬುದು ಕತಾರ್‌ನ ಉದ್ದೇಶ.

‘ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಮೊದಲ ಪಂದ್ಯದಲ್ಲಿ ಎದುರಿಸಿದ್ದಷ್ಟು ಒತ್ತಡ, ಸೆನೆಗಲ್‌ ವಿರುದ್ಧ ಆಡುವಾಗ ಆಟಗಾರರಿಗೆ ಎದುರಾಗದು ಎಂಬುದು ನನ್ನ ವಿಶ್ವಾಸ. ಗೆಲುವಿಗೆ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತೇವೆ’ ಎಂದು ಕತಾರ್‌ ತಂಡದ ಕೋಚ್‌ ಫೆಲಿಕ್ಸ್‌ ಸ್ಯಾಂಚೆಜ್ ಹೇಳಿದ್ದಾರೆ.

ಆರಂಭಿಕ ಪಂದ್ಯದಲ್ಲಿ ಬಲಿಷ್ಠ ನೆದರ್ಲೆಂಡ್ಸ್‌ ಎದುರು ಸೋತಿದ್ದ ಸೆನೆಗಲ್‌, ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಡ್‌ಫೀಲ್ಡರ್‌ ಚೆಕೌ ಕೊಯಾಟೆ, ಶುಕ್ರವಾರ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಈ ತಂಡವು ಫಾರ್ವರ್ಡ್‌ ಆಟಗಾರರಾದ ಇಸ್ಮಾಯಿಲಾ ಸಾರ್, ಬುಲಾಯೆ ದಿಯಾ ಮತ್ತು ಕ್ರೆಪಿನ್ ದಿಯಾಟ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌: ಶುಕ್ರವಾರ ರಾತ್ರಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಅಮೆರಿಕದ ಸವಾಲು ಎದುರಿಸಲಿದೆ. ಮೊದಲ ಪಂದ್ಯದಲ್ಲಿ 6–2 ಗೋಲುಗಳಿಂದ ಇರಾನ್‌ ತಂಡವನ್ನು ಮಣಿಸಿದ್ದ ಇಂಗ್ಲೆಂಡ್, ಸತತ ಎರಡನೇ ಗೆಲುವು ಪಡೆದು ನಾಕೌಟ್‌ ಹಂತ ಪ್ರವೇಶಿಸುವ ಆತ್ಮವಿಶ್ವಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.