ADVERTISEMENT

ಬತ್ತದ ಉತ್ಸಾಹ: ಗದ್ದೆಯಲ್ಲಿ ಬೆವರು ಸುರಿಸುತ್ತಿರುವ ಅಮರ್‌ಜೀತ್

ಪಿಟಿಐ
Published 29 ಜುಲೈ 2020, 13:55 IST
Last Updated 29 ಜುಲೈ 2020, 13:55 IST
ಅಮರ್‌ಜೀತ್ ಸಿಂಗ್
ಅಮರ್‌ಜೀತ್ ಸಿಂಗ್   

ನವದೆಹಲಿ: ಕೊರೊನಾ ಸೃಷ್ಟಿಸಿರುವ ವಿಷಮ ಸ್ಥಿತಿಗೆ ಎದೆಗುಂದಲಿಲ್ಲ ಈ ಆಟಗಾರ. ಪಂದ್ಯಗಳಾಗಲಿ ಅಭ್ಯಾಸವಾಗಲಿ ನಡೆಯದೇ ಇದ್ದರೂ ಸ್ವಗ್ರಾಮದ ಬತ್ತದ ಗದ್ದೆಯಲ್ಲಿ ಬತ್ತದ ಉತ್ಸಾಹದೊಂದಿಗೆ ದುಡಿಯುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಭಾರತದ ಯುವ ಫುಟ್‌ಬಾಲ್ ಆಟಗಾರ ಅಮರ್‌ಜೀತ್ ಸಿಂಗ್ ಕಿಯಾಮ್.

ಮೂರು ವರ್ಷಗಳ ಹಿಂದೆ ನಡೆದಿದ್ದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಅಮರ್‌ಜೀತ್ ಸಿಂಗ್ ಮಣಿಪುರದ ತೌಬಾಲ್ ಗ್ರಾಮದವರು. ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಜೆಮ್‌ಶೆಡ್‌ಪುರ ಎಫ್‌ಸಿ ಪರ ಆಡುತ್ತಿದ್ದಾರೆ. ಕೊರೊನಾ ಹಾವಳಿ ಆರಂಭವಾದ ನಂತರ ಭಾರತದಲ್ಲಿ ಫುಟ್‌ಬಾಲ್ ಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಊರಲ್ಲೇ ವ್ಯಾಯಾಮ ಮಾಡಿಕೊಂಡು ಫಿಟ್‌ನೆಸ್ ಉಳಿಸಿಕೊಳ್ಳುತ್ತಿರುವ ಅವರು ಗದ್ದೆಯಲ್ಲಿ ಪಾಲಕರಿಗೆ ನೆರವಾಗುತ್ತಿದ್ದಾರೆ.

19 ವರ್ಷ ವಯಸ್ಸಿನ, ಮಿಡ್‌ಫೀಲ್ಡರ್ ಈಗಾಗಲೇ ಭಾರತ ತಂಡಕ್ಕೆ ‘ತೇರ್ಗಡೆ‘ ಹೊಂದಿದ್ದಾರೆ. ಮಳೆಯಿಂದಾಗಿ ಕೆಸರಾಗಿರುವ ಗದ್ದೆಗಳಲ್ಲಿ ತಂದೆಯ ಜೊತೆ ‘ಕಣಕ್ಕೆ‘ ಇಳಿಯುವ ಅಮರ್‌ಜೀತ್ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

’ಇಲ್ಲಿರುವ ವಿಶಾಲ ಜಾಗದಲ್ಲಿ ನಮ್ಮದೂ ಸಣ್ಣ ಹೊಲವೊಂದು ಇದೆ. ಕೃಷಿ ಚಟುವಟಿಕೆಯಲ್ಲಿ ತಂದೆಗೆ ನೆರವಾಗಲು ಖುಷಿಯಾಗುತ್ತಿದೆ. ನಮ್ಮ ಮೂಲಕ್ಕೆ ಮರಳುವುದಕ್ಕೂ ಪಾಲಕರಿಗೆ ಸಹಾಯ ಮಾಡುವುದಕ್ಕೂ ಹಿಂಜರಿಕೆ ಇರಬಾರದು. ಇಂಥ ಕೆಲಸದಲ್ಲಿ ಮುಜುಗರಪಡುವಂಥಾದ್ದು ಏನೂ ಇಲ್ಲ’ ಎಂದು ಅವರು ಹೇಳಿರುವುದಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ತಿಳಿಸಿದೆ.

‘ತಲೆಮಾರುಗಳಿಂದ ನನ್ನ ಕುಟುಂಬದವರು ಕೃಷಿ ಮಾಡುತ್ತಾಬಂದಿದ್ದಾರೆ. ಫುಟ್‌ಬಾಲ್‌ನಲ್ಲೇ ಹೆಚ್ಚು ಕಾಲ ಕಳೆದ ಕಾರಣ ಸಣ್ಣ ವಯಸ್ಸಿನಿಂದಲೇ ನನಗೆ ಕೃಷಿ ಕಡೆಗೆ ಹೆಚ್ಚು ಗಮನಕೊಡಲು ಆಗಿರಲಿಲ್ಲ. ಅಭ್ಯಾಸ ಮತ್ತು ಪಂದ್ಯಗಳಿಗಾಗಿ ಹೆಚ್ಚಿನ ಕಾಲ ರಾಜ್ಯದಿಂದ ಹೊರಗಡೆಯೇ ಇರುತ್ತಿದ್ದೆ. ಆದ್ದರಿಂದ ಗದ್ದೆಯ ಕಡೆಗೆ ಹೋಗಲು ಸಮಯ ಸಿಗುತ್ತಿರಲಿಲ್ಲ. ಈಗ ಮಣ್ಣಿನಲ್ಲಿ ಕೆಲಸ ಮಾಡಲು ಮತ್ತೆ ಅವಕಾಶ ಲಭಿಸಿದಂತಾಗಿದೆ’ ಎಂದಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ದೀರ್ಘಕಾಲ ಊರಲ್ಲಿ ಇರಲು ಸಾಧ್ಯವಾಗಲೇ ಇಲ್ಲ. ಫುಟ್‌ಬಾಲ್ ಋತು ಮುಗಿದರೂ ಸಾಮರ್ಥ್ಯ ವೃದ್ಧಿಗಾಗಿ ಪ್ರವಾಸ ಕಾರ್ಯಕ್ರಮಗಳು ಇರುತ್ತಿದ್ದವು. ಅದಿಲ್ಲದಿದ್ದರೆ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಉತ್ಸಾಹ ತುಂಬುವ ಯೋಜನೆಗಳ ಭಾಗವಾಗಿ ಅವರೊಂದಿಗೆ ಇರುತ್ತಿದ್ದೆ. ಕೆಲವೊಮ್ಮೆ ಕೆಲವು ವಾರಗಳ ಕಾಲ ಊರಲ್ಲಿರಲು ಅವಕಾಶ ಲಭಿಸುತ್ತಿತ್ತು. ಆದರೆ ಆಗ ಕೃಷಿ ಚಟುವಟಿಕೆ ನಡೆಯುತ್ತಿರಲಿಲ್ಲ. ಈಗ ತಿಂಗಳುಗಟ್ಟಲೆ ಮನೆಯಲ್ಲೇ ಇದ್ದೇನೆ. ಇದೇ ಸಂದರ್ಭದಲ್ಲಿ ಕೃಷಿ ಕಾರ್ಯಗಳೂ ನಡೆಯುತ್ತಿವೆ. ಹೀಗಾಗಿ ಕುಟುಂಬದ ಮೂಲವೃತ್ತಿಯಲ್ಲಿ ತೊಡಗಲು ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಮನೆಯಿಂದ ಹೊರಗೆ ಹೋಗಿ ಹೊಲದಲ್ಲಿ ದುಡಿಯುವುದರಿಂದ ಮೈಮನಕ್ಕೆ ನವೋಲ್ಲಾಸ ಸಿಗುತ್ತಿದೆ. ಪ್ರತಿಯೊಬ್ಬರೂ ಯಾವುದಾದರೂ ಹವ್ಯಾಸಗಳನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು. ವೃತ್ತಿಜೀವನದಲ್ಲಿ ಏರುಪೇರಾದಾಗ ಅಥವಾ ನಿತ್ಯ ಚಟುವಟಿಕೆಯಲ್ಲಿ ವ್ಯತ್ಯಯಗಳಾದಾಗ ಈ ಹವ್ಯಾಸಗಳು ಕೈ ಹಿಡಿಯುತ್ತವೆ ಎಂಬುದು ನನ್ನ ಅನಿಸಿಕೆ. ಫುಟ್‌ಬಾಲ್ ಅಂಗಣದಿಂದ ದಿನಗಟ್ಟಲೆ ದೂರು ಉಳಿದಿರುವುರಿಂದ ಉಂಟಾಗಿರುವ ಬೇಸರ ಕಳೆಯಲು ಕೃಷಿ ಸಹಕಾರಿಯಾಗಿದೆ. ಸದ್ಯ ಹೊಲದಲ್ಲಿ ಖುಷಿಯಾಗಿ ಕಾಲಕಳೆಯುದ್ದೇನೆ’ ಎಂದು ಅವರು ವಿವರಿಸಿರುವುದಾಗಿ ಫುಟ್‌ಬಾಲ್ ಫೆಡರೇಷನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.