ಫುಟ್‌ಬಾಲ್
ಬೆಂಗಳೂರು: ಎಂಥಾ ಪರಿಸ್ಥಿತಿಯಲ್ಲೂ ಕಠಿಣ ಹೋರಾಟದಲ್ಲಿ ತೊಡಗುವ ಉತ್ಕಟ ಬಯಕೆಯೇ ಈ ಋತುವಿನುದ್ದಕ್ಕೂ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಆಟದಲ್ಲಿ ಮೈದಳೆದಂತೆ ಕಾಣುತಿತ್ತು. ಎಫ್‌ಸಿ ಗೋವಾ ವಿರುದ್ಧ ಬುಧವಾರ ನಡೆದ ಐಎಸ್‌ಎಲ್ ಸೆಮಿಫೈನಲ್ ಮೊದಲ ಲೆಗ್‌ನಲ್ಲೂ ಈ ಮನೋಭಾವ ಎದ್ದುಕಂಡಿತು.
ಐಎಸ್‌ಎಲ್ ಪ್ಲೇ ಆಫ್ ಹಂತದಲ್ಲಿ ಸತತ ಎರಡು ಜಯ ಸಾಧಿಸಿದ ಮೂರನೇ ಕೋಚ್ ಎಂಬ ಹಿರಿಮೆ ಬಿಎಫ್‌ಸಿ ಹೆಡ್ ಕೋಚ್ ಜೆರಾರ್ಡ್ ಝಾರ್ಗೋಝಾ ಅವರದಾಯಿತು. ಸೈಮನ್ ಗ್ರೇಸನ್ ಮತ್ತು ಪೀಟರ್ ಕ್ರಾಟ್ಕಿ ಮೊದಲ ಇಬ್ಬರು.
‘ಪೂರ್ವಸಿದ್ಧತೆ ಮತ್ತು ಮನೋಭೂಮಿಕೆ ನಮ್ಮ ತಂಡವು, ಗೋವಾ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ 2–0 ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು’ ಎನ್ನುತ್ತಾರೆ ಝಾರ್ಗೋಝಾ.
‘ಮುಂಬೈ ವಿರುದ್ಧ ಪ್ಲೇಆಫ್ ಪಂದ್ಯಕ್ಕೆ ಮೊದಲು 10 ದಿನ ನಮಗೆ ತರಬೇತಿಗೆ ದೊರಕಿತ್ತು. ಆಗಲೇ ತಂಡ ಪ್ಲೇ ಆಫ್ ಮೂಡ್‌ನಲ್ಲಿದ್ದುದು ವ್ಯಕ್ತವಾಗಿತ್ತು. ತಂಡದಲ್ಲಿ ಅಂಥ ವಿಶ್ವಾಸ ಕಾಣಬಹುದಾಗಿತ್ತು’ ಎಂದು ಬುಧವಾರ ತಂಡದ ಗೆಲುವಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಝಾರ್ಗೋಝಾ ಹೇಳಿದರು.
ಗೋವಾ ವಿರುದ್ಧ ಸೆಮಿಫೈನಲ್ ಲೆಗ್‌ಗೆ ಮೊದಲಿನ ಪಂದ್ಯದಲ್ಲಿ ಬ್ಲೂಸ್ ತಂಡ, ಮುಂಬೈ ಸಿಟಿ ಎಫ್‌ಸಿ ತಂಡವನ್ನು 5–0 ಗೋಲುಗಳಿಂದ ಸದೆಬಡಿದಿತ್ತು.
‘ಮುಂಬೈ ವಿರುದ್ಧದ ಗೆಲುವು ನಮಗೆ ಅಗತ್ಯ ಮನೋಬಲವನ್ನು ಒದಗಿಸಿತು. ಏಕೆಂದರೆ ಗೋವಾ ತಂಡ ಲೀಗ್‌ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿತ್ತು. ನಮಗೆ ಆ ತಂಡ ಎದುರಿಸಲು ಬೇಕಾದ ಸ್ಥೈರ್ಯವನ್ನು ಆ ಗೆಲುವು ಒದಗಿಸಿತ್ತು. ನಾವು ಆ ಗೆಲುವಿಗೆ ಯೋಗ್ಯರಾಗಿದ್ದೆವು. ಇನ್ನೂ ಹೆಚ್ಚಿನ ಗೋಲು ಗಳಿಸಬಹುದಾಗಿತ್ತು. ನಾವು ಗೋವಾದಲ್ಲೂ ಕಠಿಣ ಹೋರಾಟ ನೀಡುತ್ತೇವೆ’ ಎಂದು ಅವರು ವಿಶ್ವಾಸದಿಂದ ಹೇಳಿದರು.
ಎದುರಾಳಿ ತಂಡದ ಬಗ್ಗೆಯೂ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ‘ಅವರು (ಎಫ್‌ಸಿ ಗೋವಾ) ತವರಿನಲ್ಲಿ ಎರಡನೇ ಲೆಗ್ ಆಡಲು ಎಲ್ಲ ರೀತಿ ಯೋಗ್ಯರಾಗಿದ್ದಾರೆ. ಅವರು ಲೀಗ್‌ನಲ್ಲಿ ನಮಗಿಂತ 10 ಪಾಯಿಂಟ್ ಹೆಚ್ಚು ಪಡೆದಿದ್ದರು’ ಎಂದರು.
ನಾಜೂಕಾದ ಫಿನಿಷಿಂಗ್ ಮೂಲಕ ಬಿಎಫ್‌ಸಿ ತಂಡ ದಾಳಿಯಲ್ಲಿ ಗಮನಸೆಳೆದರೆ, ಭಾರತ ತಂಡದ ಆಟಗಾರರಾದ ನಾಮ್‌ಗ್ಯಾಲ್ ಭುಟಿಯಾ, ಚಿಂಗ್ಲೆಸನಾ ಸಿಂಗ್, ರಾಹುಲ್ ಭೆಕೆ, ರೋಷನ್ ಸಿಂಗ್ ಅವರಿದ್ದ ರಕ್ಷಣಾ ಪಡೆಯ ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಯಿತು.
‘ಅವರ ಆಟ ನಿಜಕ್ಕೂ ಅಮೋಘವಾಗಿತ್ತು. ಭುಟಿಯಾ ಪಂದ್ಯದ ಆಟಗಾರನಾದರೆ, ರೋಷನ್ ಮತ್ತು ಇನ್ನಿಬ್ಬರು ಸೆಂಟರ್–ಬ್ಯಾಕ್‌ಗಳು ಅಚ್ಚುಕಟ್ಟಾದ ಆಟವಾಡಿದರು. ಮುಂದೆಯೂ ಅವರಿಂದ ಇಂಥ ಆಟ ಬರುವ ವಿಶ್ವಾಸವಿದೆ’ ಎಂದರು.
ಬೆಂಗಳೂರು ಎಫ್‌ಸಿ, ಫತೋರ್ಡಾದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸೆಮಿಫೈನಲ್ ಎರಡನೇ ಲೆಗ್ ಆಡಲು ಗೋವಾಕ್ಕೆ ತೆರಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.