ಲಂಡನ್‌ನಲ್ಲಿರುವ ಕಾಮನ್‌ವೆಲ್ತ್ ಸ್ಪೋರ್ಟ್ಸ್ ಮೌಲ್ಯಮಾಪನ ಸಮಿತಿಗೆ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ, ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಮತ್ತಿತರರು ಪ್ರಸ್ತಾವ ಸಲ್ಲಿಸಿದರು
ಪಿಟಿಐ ಚಿತ್ರ
ನವದೆಹಲಿ: ಭಾರತದಲ್ಲಿ ಎರಡು ದಶಕಗಳ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ) ಆಯೋಜನೆ ಗೊಳ್ಳುವುದು ಬಹುತೇಕ ಖಚಿತವಾಗಿದೆ.
2030ರಲ್ಲಿ ಕಾಮನ್‌ವೆಲ್ತ್ ಕೂಟ ನಡೆಸುವ ತಾಣವಾಗಿ ಅಹಮದಾಬಾದ್ ನಗರಕ್ಕೆ ಆದ್ಯತೆ ನೀಡಬೇಕು ಎಂದು ‘ಕಾಮನ್‌ವೆಲ್ತ್ ಸ್ಪೋರ್ಟ್ಸ್’ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಗ್ಲಾಸ್ಗೋದಲ್ಲಿ ನವೆಂಬರ್ 26ರಂದು ನಡೆಯಲಿರುವ ಮಂಡಳಿಯ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು.
ಅಹಮದಾಬಾದ್ ನಗರಕ್ಕೇ ಕೂಟದ
ಆತಿಥ್ಯ ಒಲಿಯುವುದು ಬಹುತೇಕ ಖಚಿತವಾಗಿದ್ದು, ಸಭೆಯಲ್ಲಿ ಪ್ರಕಟಿಸು ವುದು ಕೇವಲ ಔಪಚಾರಿಕವಾಗುವ ನಿರೀಕ್ಷೆ ಇದೆ.
ಆದರೆ, ನೈಜೀರಿಯಾದ ಅಬುಜಾ ನಗರವೂ ಈ ಕೂಟದ ಆತಿಥ್ಯ ಪಡೆಯುವ ರೇಸ್‌ನಲ್ಲಿದೆ. ಆಫ್ರಿಕಾ ದೇಶಗಳಿಗೆ ‘ಅಭಿವೃದ್ಧಿಯನ್ನು ಉತ್ತೇಜಿಸುವ
ತಂತ್ರಗಾರಿಕೆ’ಯಾಗಿ ಭವಿಷ್ಯದಲ್ಲಿ ಗೇಮ್ಸ್ ಆಯೋಜನೆ ನೀಡುವ ಸಾಧ್ಯತೆ ಇದೆ. 2034ರ ಕೂಟ ಮಂಜೂರು ಮಾಡುವ ನಿರೀಕ್ಷೆ ಇದೆ.
2010ರಲ್ಲಿ ನವದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಗೊಂಡಿತ್ತು. 2036ರಲ್ಲಿ ಒಲಿಂಪಿಕ್ ಕೂಟದ ಆಯೋಜನೆಗೆ ಭಾರತವು ಪ್ರಸ್ತಾವ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಕಾಮನ್‌ವೆಲ್ತ್ ಕೂಟ ಲಭಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
‘ಕಾಮನ್‌ವೆಲ್ತ್ ಸ್ಪೋರ್ಟ್ ಕಾರ್ಯ ಕಾರಿ ಮಂಡಳಿಯು 2030ರ ಕೂಟದ ಆತಿಥ್ಯವನ್ನು ಅಹಮದಾಬಾದ್‌ಗೆ ನೀಡಲು ಇಂದು (ಬುಧವಾರ) ಶಿಫಾರಸು ಮಾಡಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಭಾರತದ ಅಹಮದಾಬಾದ್ ಮತ್ತು ನೈಜೀರಿಯಾದ ಅಬುಜಾ ನಗರಗಳು ಆತಿಥ್ಯಕ್ಕಾಗಿ ಪ್ರಸ್ತಾವ ಸಲ್ಲಿಸಿದ್ದವು’ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
‘ಭಾರತದ ಕ್ರೀಡಾಕ್ಷೇತ್ರಕ್ಕೆ ಇದು ಬಹುದೊಡ್ಡ ಸಂತಸದ ಕ್ಷಣವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕ್ರೀಡೆಯು ಬೆಳೆಯುತ್ತಿರುವುದರ ಸಂಕೇತ ಇದು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಬದ್ಧತೆಯಿಂದಾಗಿ ಭಾರತವು ವಿಶ್ವ ಕ್ರೀಡಾ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ‘ಎಕ್ಸ್’ನಲ್ಲಿ
ಸಂದೇಶ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.