ADVERTISEMENT

31 ಜಿಲ್ಲೆಗಳಿಗೂ ಖೇಲೋ ಇಂಡಿಯಾ ಕೇಂದ್ರ: ಕೇಂದ್ರ ಕ್ರೀಡಾ ಸಚಿವಾಲಯದಿಂದ ಮಂಜೂರು

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:14 IST
Last Updated 25 ಮೇ 2021, 16:14 IST
ಕೆ.ಸಿ. ನಾರಾಯಣಗೌಡ
ಕೆ.ಸಿ. ನಾರಾಯಣಗೌಡ   

ಬೆಂಗಳೂರು: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ತಲಾ ಒಂದು ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡಿದೆ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದ್ದಾರೆ.

‘ರಾಜ್ಯದ ಎಲ್ಲ ಜಿಲ್ಲೆಗಳಿಗೂ ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಸಲ್ಲಿಸಿದ್ದೆ. ಅದನ್ನು ಪುರಸ್ಕರಿಸಿರುವ ಸಚಿವರು 31 ಕೇಂದ್ರಗಳನ್ನು ಮಂಜೂರು ಮಾಡಿದ್ದಾರೆ. ನಾಲ್ಕು ವರ್ಷಗಳವರೆಗೆ ಯೋಜನೆ ಜಾರಿಯಲ್ಲಿರಲಿದೆ. ಪ್ರತಿ ಕೇಂದ್ರಕ್ಕೆ ವಾರ್ಷಿಕ ತಲಾ ₹ 10 ಲಕ್ಷ ಅನುದಾನ ದೊರೆಯಲಿದೆ. ಇದರಿಂದ ರಾಜ್ಯದ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗಲಿದೆ’ ಎಂದು ಅವರು ವಿವರಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಒಂದು ಕ್ರೀಡಾ ಚಟುವಟಿಕೆಗೆ ಸೀಮಿತವಾಗಿ ಈ ಕೇಂದ್ರಗಳನ್ನು ಆರಂಭಿಸಬೇಕು. ನಿರ್ದಿಷ್ಟ ಕ್ರೀಡೆಗೆ ಸಂಬಂಧಿಸಿದಂತೆ ಮಾಜಿ ಚಾಂಪಿಯನ್‌, ಅಥ್ಲೀಟ್‌ಗಳನ್ನು ತರಬೇತುದಾರರನ್ನಾಗಿ ನೇಮಿಸಬೇಕು. ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಬೆಂಗಳೂರು ಪ್ರಾದೇಶಿಕ ಕೇಂದ್ರ ಮತ್ತು ಇತರ ಸಲೆಹೆಗಾರರ ಜತೆ ಸಮಾಲೋಚಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಖೇಲೋ ಇಂಡಿಯಾದ ಹಿರಿಯ ನಿರ್ದೇಶಕ ಸತ್ಯನಾರಾಯಣ ಮೀನಾ ಮೇ 21ರಂದು ರಾಜ್ಯದ ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

31 ಕೇಂದ್ರಗಳ ಆರಂಭಕ್ಕೂ ಸಾಯ್‌ ಪ್ರಧಾನ ಕಚೇರಿಯ ಮೂಲಕ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪತ್ರ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.