ADVERTISEMENT

ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ಎಂಟು ಮಂದಿ ಫೈನಲ್‌ಗೆ

ಪಿಟಿಐ
Published 21 ಏಪ್ರಿಲ್ 2021, 13:14 IST
Last Updated 21 ಏಪ್ರಿಲ್ 2021, 13:14 IST
ಭಾರತದ ವಿಂಕಾ (ಎಡ) ಹಾಗೂ ಪೂನಂ (ಬಲ). ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಇದ್ದಾರೆ– ಪಿಟಿಐ ಸಂಗ್ರಹ ಚಿತ್ರ
ಭಾರತದ ವಿಂಕಾ (ಎಡ) ಹಾಗೂ ಪೂನಂ (ಬಲ). ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಇದ್ದಾರೆ– ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಭಾರತದ ಏಳು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಮಂದಿ ಬಾಕ್ಸರ್‌ಗಳು ವಿಶ್ವ ಯೂತ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪೋಲೆಂಡ್‌ನ ಕಿಯೆಲ್ಸೆಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳ ನಿರೀಕ್ಷೆ ಮೂಡಿಸಿದ್ದಾರೆ.

ಎಂಟು ಮಂದಿ ಫೈನಲಿಸ್ಟ್‌ಗಳ ಜೊತೆಗೆ ಮೂವರು ಈಗಾಗಲೇ ಕಂಚಿನ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಹಂಗರಿಯಲ್ಲಿ 2018ರಲ್ಲಿ ನಡೆದ ವಿಶ್ವ ಯೂತ್ ಬಾಕ್ಸಿಂಗ್‌ನಲ್ಲಿ ಭಾರತ 10 ಪದಕಗಳನ್ನು ಗೆದ್ದಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಆ ಸಾಧನೆಯನ್ನು ಮೀರುವ ಸಾಧ್ಯತೆಯಿದೆ.

ಗೀತಿಕಾ (ಮಹಿಳೆಯರ 48 ಕೆಜಿ ವಿಭಾಗ), ಬೇಬಿರೋಜಿಸನಾ ಚಾನು (51 ಕೆಜಿ), ವಿಂಕಾ (60 ಕೆಜಿ), ಅರುಂಧತಿ ಚೌಧರಿ (69 ಕೆಜಿ), ಪೂನಂ (57 ಕೆಜಿ), ಸನಮಚಾ ಚಾನು (75 ಕೆಜಿ) ಹಾಗೂ ಅಲ್ಫಿಯಾ (81+ ಕೆಜಿ) ಫೈನಲ್ ತಲುಪಿದ ಮಹಿಳಾ ಬಾಕ್ಸರ್‌ಗಳು.

ADVERTISEMENT

ಪುರುಷರ ವಿಭಾಗದಲ್ಲಿ ಸಚಿನ್ (56 ಕೆಜಿ) ಮಾತ್ರ ಚಿನ್ನದ ಪದಕದ ಸುತ್ತಿಗೆ ತಲುಪಿದರು.

ಸೆಮಿಫೈನಲ್ ಬೌಟ್‌ಗಳಲ್ಲಿ ಗೀತಿಕಾ 5–0ಯಿಂದ ಇಟಲಿಯ ಎರಿಕಾ ಪ್ರಿಸಿಯಂಡಾರೊ ಎದುರು ಜಯಿಸಿದರು. ವಿಂಕಾ 4–1ರಿಂದ ಜೆಕ್ ಗಣರಾಜ್ಯದ ವೆರೋನಿಕಾ ಗಾಜ್ದೊವಾ ಎದುರು ಗೆದ್ದರು. ಅರುಂಧತಿ 5–0ಯಿಂದ ಉಜ್ಬೆಕಿಸ್ತಾನದ ಖದಿಚಾಬೊನು ಅಬ್ದುಲ್ಲಾಯೆವ್ ವಿರುದ್ಧ ಜಯಿಸಿದರೆ, ಬೇಬಿರೋಜಿಸನಾ ಇಷ್ಟೇ ಅಂತರದಿಂದ ಇಟಲಿಯ ಎಲೆನ್‌ ಆಯರಿ ಅವರನ್ನು ಮಣಿಸಿದರು.

ಪೂನಂ 5–0ಯಿಂದ ಉಜ್ಬೆಕಿಸ್ತಾನದ ಸಿತೋರಾ ತರ್ದಿಬೆಕೊವಾ ಸವಾಲು ಮೀರಿದರೆ, ಸನಾಮಚಾ 4–1ರಿಂದ ಪೋಲೆಂಡ್‌ನ ದರಿಯಾ ಪರಾಡ ಅವರನ್ನು ಪರಾಭವಗೊಳಿಸಿದರು. ಅಲ್ಫಿಯಾ ಅವರು 3–2ರಿಂದ ಪೋಲೆಂಡ್‌ನ ಒಲಿವಿಯಾ ತೊಬೊರೆಕ್ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು.

ಸಚಿನ್‌ ಅವರು ಇಟಲಿಯ ಮೈಕೆಲ್ ಬಾಲ್ಡಸ್ಸಿ ಅವರನ್ನು ಸೋಲಿಸಿ ಫೈನಲ್ ತಲುಪಿದರು. ಅಂಕಿತ್ ನರ್ವಾಲ್‌ (64 ಕೆಜಿ), ವಿಶ್ವಾಮಿತ್ರ ಚೋಂಗ್ಧಮ್‌ (49 ಕೆಜಿ) ಹಾಗೂ ವಿಶಾಲ್ ಗುಪ್ತಾ (91 ಕೆಜಿ) ಅವರು ಸೆಮಿಫೈನಲ್ ಬೌಟ್‌ಗಳಲ್ಲಿ ಸೋತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.