ADVERTISEMENT

ಚೆಸ್‌ | ಕಾರ್ಲ್‌ಸನ್‌ಗೆ ಬೆಚ್ಚಿಸಿದ ಭಾರತದ ಪೋರ: ಆನ್‌ಲೈನ್ ಟೂರ್ನಿಯ ಪಂದ್ಯ ಡ್ರಾ

ಪಿಟಿಐ
Published 25 ಜೂನ್ 2025, 12:24 IST
Last Updated 25 ಜೂನ್ 2025, 12:24 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ದೆಹಲಿಯ 9 ವರ್ಷ ವಯಸ್ಸಿನ ಪೋರ ಆರಿತ್ ಕಪಿಲ್‌, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನೇ ಸೋಲಿಸುವ ಹಂತಕ್ಕೆ ತಲುಪಿದ್ದ. ಆದರೆ ಅನುಭವಿ ಕಾರ್ಲ್‌ಸನ್‌, ಭಾರತದ ಬಾಲಕ ಸಮಯದ ಒತ್ತಡಕ್ಕೆ ಸಿಲುಕಿದ್ದರಿಂದ ಡ್ರಾ ಮಾಡುವಲ್ಲಿ ಯಶಸ್ವಿಯಾದ. ಈ ಪಂದ್ಯ ನಡೆದಿದ್ದು ‘ಅರ್ಲಿ ಟೈಟಲ್ಡ್‌ ಟ್ಯೂಸ್ಡೆ’ ಹೆಸರಿನ ಟೂರ್ನಿಯಲ್ಲಿ.

ಇದನ್ನು ಪ್ರಮುಖ ಆನ್‌ಲೈನ್‌ ವೇದಿಕೆ ಆಯೋಜಿಸಿತ್ತು. ಇತ್ತೀಚೆಗಷ್ಟೇ ಭಾರತದ ರಾಷ್ಟ್ರೀಯ 9 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಆರಿತ್, ಐದು ಬಾರಿಯ ವಿಶ್ವ ಚಾಂಪಿಯನ್ ಆಟಗಾರನ ನಡೆಗಳಿಗೆ, ಅಷ್ಟೇ ಉತ್ತಮ ನಡೆಗಳನ್ನಿರಿಸುವ ಮೂಲಕ ಗಮನ ಸೆಳೆದ. ನಾರ್ವೆಯ ಆಟಗಾರ ಒಂದು ಹಂತದಲ್ಲಿ ಸೋಲುವುದು ಖಚಿತವೆಂಬಂತೆ ಕಂಡಿತ್ತು.

ಆದರೆ ಆರಿತ್‌ಗೆ ಕ್ಲಾಕ್‌ನಲ್ಲಿ ಕೆಲವೇ ಸೆಕೆಂಡುಗಳು ಉಳಿದ ಕಾರಣ ಸಂಪೂರ್ಣ ಹತೋಟಿಯನ್ನು ಗೆಲುವನ್ನಾಗಿ ಪರಿವರ್ತಿಸಲು ಆಗಲಿಲ್ಲ. ಕಾರ್ಲ್‌ಸನ್‌ ಇದರ ಲಾಭ ಪಡೆದು ಡ್ರಾ ಸಾಧಿಸಿದರು.

ADVERTISEMENT

ಜಾರ್ಜಿಯಾದಲ್ಲಿ ವಿಶ್ವ 10 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ ಆಡಲು ಹೋಗಿರುವ ಆರಿತ್, ಅಲ್ಲಿನ ಹೋಟೆಲ್‌ನಿಂದಲೇ ಟೂರ್ನಿಯಲ್ಲಿ ಆಡಿದ್ದ. 

10 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಹೋರಾಟದಲ್ಲಿ ಆರಿತ್ ತೊಡಗಿದ್ದಾನೆ. ಅಲ್ಲಿ ಮೊದಲ ಎರಡು ಸುತ್ತಿನ ಪಂದ್ಯಗಳಲ್ಲಿ ಗೆದ್ದಿದ್ದಾನೆ. ಮೂರನೇ ಸುತ್ತು ಬುಧವಾರ ನಿಗದಿಯಾಗಿತ್ತು.

ಇದೇ ವೇಳೆ, ಭಾರತದ ವಿ.ಪ್ರಣವ್ ಅವರು ‘ಅರ್ಲಿ ಟೈಟಲ್ಡ್‌ ಟ್ಯೂಸ್ಡೆ’ ಟೂರ್ನಿಯ ಚಾಂಪಿಯನ್‌ ಆದರು. 11 ಸುತ್ತುಗಳಲ್ಲಿ 10 ಪಾಯಿಂಟ್ಸ್‌ ಕಲೆಹಾಕಿದರು. ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಹ್ಯಾನ್ಸ್‌ ನೀಮನ್ ಮತ್ತು ಕಾರ್ಲ್‌ಸನ್‌ ತಲಾ 9.5 ಪಾಯಿಂಟ್ಸ್‌ ಗಳಿಸಿದರು. ಟೈಬ್ರೇಕ್‌ನಲ್ಲಿ ನೀಮನ್ ಎರಡನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.