ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಸಂಭ್ರಮದಲ್ಲಿ ಮಿಂದು ಟ್ರೋಫಿ ಹಿಡಿದ ತಾರೆ

ಪಿಟಿಐ
Published 13 ಡಿಸೆಂಬರ್ 2024, 16:02 IST
Last Updated 13 ಡಿಸೆಂಬರ್ 2024, 16:02 IST
ವಿಶ್ವ ಚಾಂಪಿಯನ್‌ ಟ್ರೋಫಿಯೊಂದಿಗೆ ಗುಕೇಶ್
ವಿಶ್ವ ಚಾಂಪಿಯನ್‌ ಟ್ರೋಫಿಯೊಂದಿಗೆ ಗುಕೇಶ್   

ಸಿಂಗಪುರ: ನಿದ್ದೆಗೆಟ್ಟ ಪರಿಣಾಮ ಗುಕೇಶ್‌ ಅವರ ಕಣ್ಣುರಿ ಕಾಡುತಿತ್ತು. ಆದರೆ ಶುಕ್ರವಾರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ದಿನವನ್ನು ಅವರು ಲವಲವಿಕೆಯಿಂದ ಹಸನ್ಮುಖರಾಗಿ ಕಳೆದರು. ನೂರಾರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು. ಅಂತಿಮವಾಗಿ ‘ಮೂಹೂರ್ತ’ ಸಮೀಪಿಸುತ್ತಿದ್ದಂತೆ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಿ ಟ್ರೋಫಿ ಹಿಡಿದು ಸಂಭ್ರಮಿಸಿದರು.

18 ವರ್ಷ ವಯಸ್ಸಿನ ಚೆನ್ನೈ ಆಟಗಾರ ಗುರುವಾರ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವದ 18ನೇ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ವಿಶ್ವನಾಥನ್ ಆನಂದ್ ಅವರ ನಂತರ ವಿಶ್ವ ಚಾಂಪಿಯನ್ ಟ್ರೋಫಿ ಹಿಡಿದ ಭಾರತದ ಎರಡನೇ ಆಟಗಾರನಾದರು.

ಬೆಳಿಗ್ಗೆ ಟ್ರೋಫಿಯ ದರ್ಶನದೊಡನೆ ಅವರ ದಿನಚರಿ ಆರಂಭವಾಯಿತು. ಆದರೆ ಅದನ್ನು ಸ್ಪರ್ಶಿಸಲಿಲ. ಸಮಾರೋಪ ಸಮಾರಂಭದವರೆಗೆ ಕಾದರು. ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ (ಫಿಡೆ) ಅಧ್ಯಕ್ಷ ಅರ್ಕಾಡಿ ದ್ವೊರ್ಕೊವಿಚ್‌ ಅವರು ಟ್ರೋಫಿಯನ್ನು ಭಾರತದ ಯುವ ತಾರೆಗೆ ಪ್ರದಾನ ಮಾಡಿದ ವೇಳೆಯೇ ಅದರ ಖುಷಿಯನ್ನು ಗುಕೇಶ್ ಅನುಭವಿಸಿದರು.

ADVERTISEMENT

‘ಈ ಟ್ರೋಫಿ ಎತ್ತಿ ಹಿಡಿದಿರುವುದು ಮತ್ತು ನನ್ನ ಕನಸು ಸಾಕಾರಗೊಂಡಿರುವುದು ಬದುಕಿನ ಬೇರಾವುದೇ ಕ್ಷಣಕ್ಕಿಂತ ದೊಡ್ಡದು’ ಎಂದು ಹದಿಹರೆಯದ ಆಟಗಾರ ಹೇಳಿದರು. ಚಿನ್ನದ ಪದಕ, ಟ್ರೋಫಿಯ ಜೊತೆ ಸುಮಾರು ₹11.03 ಕೋಟಿ ನಗದು ಬಹುಮಾನವನ್ನು ಅವರು ಸ್ವೀಕರಿಸಿದರು.

ಇದಕ್ಕೆ ಮೊದಲು ಅವರು ಹಲವು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದರು. ಎಳೆಯ ಮಕ್ಕಳಿಂದ ಹಿಡಿದು ವಯಸ್ಸಾದವರೂ ಇವರಲ್ಲಿ ಒಳಗೊಂಡಿದ್ದರು. ಸಿಂಗಪುರದಲ್ಲಿ ನೆಲಸಿರುವ ಭಾರತೀಯ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಅವರು ತಂದಿದ್ದ ಸ್ಮರಣಿಕೆಗಳ ಮೇಲೆ ಗುಕೇಶ್ ಹಸ್ತಾಕ್ಷರ ನೀಡಿದರು.

ನಿದ್ದೆಗೆಟ್ಟ ಪರಿಣಾಮ ಕಣ್ಣುರಿಯ ಅನುಭವವಾಗುತ್ತಿದೆ ಎಂದು ಒಪ್ಪಿಕೊಂಡರು. ಆದರೆ ಅಲ್ಲಿ ಸಂಭ್ರಮದ ವಾತಾವರಣ ಅವೆಲ್ಲವನ್ನೂ ಮರೆಸಿತು.

‘ಈ ಪಯಣ ಯಾವುದೇ ಕನಸಿಗಿಂತ ಕಡಿಮೆಯಿಲ್ಲ. ಹಲವು ಏರಿಳಿತಗಳನ್ನು ಕಂಡಿದ್ದೇನೆ. ಅನೇಕ ಸವಾಲುಗಳು ಎದುರಾಗಿವೆ’ ಎಂದು ಸಮಾರೋಪ ಸಮಾರಂಭದಲ್ಲಿ ಹೇಳಿದರು.

‘ಆಟದ ವೇಳೆ ಕೆಲ ಸಂದರ್ಭಗಳಲ್ಲಿ ಪರಿಹಾರ ಕಾಣದಿದ್ದಾಗ ದೇವರೊಬ್ಬರ ನೆರವಷ್ಟೇ ನನಗೆ ದೊರೆತು ದಾರಿ ತೋರುತ್ತಿತ್ತು’ ಎಂದರು.

ಪತ್ರಿಕೆಗಳ ಜೊತೆ ಮತ್ತೊಂದು ಸುತ್ತಿನ ಸಂದರ್ಶನದಲ್ಲೂ ಭಾಗಿಯಾದರು. ‘18ನೇ ವಯಸ್ಸಿನಲ್ಲಿ 18ನೇ ಚಾಂಪಿಯನ್‌’ ಎಂಬ ಪೋಸ್ಟ್‌ಅನ್ನು ಎಕ್ಸ್‌ನಲ್ಲಿ ಹಾಕಿದರು.

ವಿಶ್ವ ಚಾಂಪಿಯನ್‌ ಟ್ರೋಫಿಯೊಂದಿಗೆ ಗುಕೇಶ್ ಪಿಟಿಐ ಚಿತ್ರ

ತಮಿಳುನಾಡು ಸರ್ಕಾರದಿಂದ ₹5 ಕೋಟಿ ಘೋಷಣೆ ‌

ಚೆನ್ನೈ: ವಿಶ್ವದ ಅತಿ ಕಿರಿಯ ಚೆಸ್‌ ಚಾಂಪಿಯನ್ ಗೌರವಕ್ಕೆ ಗುರುವಾರ ಪಾತ್ರರಾದ  ಡಿ.ಗುಕೇಶ್ ಅವರಿಗೆ ₹5 ಕೋಟಿ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಈ ಸಂಬಂಧ ಸ್ಟಾಲಿನ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಸಿಂಗಪುರದಿಂದ ಮರಳಿದ ಬಳಿಕ ಮುಖ್ಯಮಂತ್ರಿ ಸ್ಟಾಲಿನ್ ನಗದು ಬಹುಮಾನ ಪ್ರದಾನ ಮಾಡಲಿದ್ದಾರೆ. ಡಿ. 17ರಂದು ಅವರು ಮರಳುವ ನಿರೀಕ್ಷೆಯಿದೆ. ತಮಿಳುನಾಡು ಸರ್ಕಾರ 2023ರ ಡಿಸೆಂಬರ್‌ನಲ್ಲಿ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ ಏರ್ಪಡಿಸುವ ಮೂಲಕ ಗುಕೇಶ್ ಅವರಿಗೆ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯಲು ಅವಕಾಶ ಒದಗಿಸಿತ್ತು. ಇದರಲ್ಲಿ ಗೆದ್ದ ಗುಕೇಶ್ ಫಿಡೆ ಸರ್ಕಿಟ್‌ ಸಾಧನೆ ಮುಖಾಂತರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದರು. ಅಲ್ಲೂ ಗೆದ್ದು ವಿಶ್ವ ಚಾಂಪಿಯನ್‌ಷಿಪ್‌ಗೆ ಚಾಲೆಂಜರ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.