ADVERTISEMENT

ಗಾಲ್ಫ್‌: ಅದಿತಿ ಅಶೋಕ್‌ಗೆ ಕಿರೀಟ

ಗಾಲ್ಫ್‌: ಮ್ಯಾಜಿಕಲ್ ಕೀನ್ಯಾ ಓಪನ್‌ನಲ್ಲಿ ಮಿಂಚು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:59 IST
Last Updated 6 ಫೆಬ್ರುವರಿ 2023, 5:59 IST
ಮ್ಯಾಜಿಕಲ್ ಕೀನ್ಯಾ ಓಪನ್‌ ಪ್ರಶಸ್ತಿಯೊಂದಿಗೆ ಅದಿತಿ ಅಶೋಕ್‌ –ಟ್ವಿಟರ್‌ ಚಿತ್ರ
ಮ್ಯಾಜಿಕಲ್ ಕೀನ್ಯಾ ಓಪನ್‌ ಪ್ರಶಸ್ತಿಯೊಂದಿಗೆ ಅದಿತಿ ಅಶೋಕ್‌ –ಟ್ವಿಟರ್‌ ಚಿತ್ರ   

ನೈರೋಬಿ: ಬೆಂಗಳೂರಿನ ಅದಿತಿ ಅಶೋಕ್ ಭಾನುವಾರ ಇಲ್ಲಿ ಕೊನೆಗೊಂಡ ಮ್ಯಾಜಿಕಲ್ ಕೀನ್ಯಾ ಲೇಡೀಸ್ ಓಪನ್‌ ಪ್ರಶಸ್ತಿ ಗೆದ್ದುಕೊಂಡರು.

ಇದರೊಂದಿಗೆ ಲೇಡಿಸ್ ಯುರೋಪಿಯನ್ ಟೂರ್ (ಎಲ್‌ಇಟಿ)ನಲ್ಲಿ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ನೈರೋಬಿಯಲ್ಲಿ ಉತ್ತಮವಾಗಿ ಆಡಿದ ಅವರು 9 ಶಾಟ್ಸ್‌ ಅಂತರದಿಂದ ಗೆಲುವು ಸಾಧಿಸಿದರು. ಮುಂದಿನ ತಿಂಗಳು 25 ವರ್ಷಕ್ಕೆ ಕಾಲಿಡಲಿರುವ ಅದಿತಿ, ನವೆಂಬರ್ 2017 ರಲ್ಲಿ ಅಬುಧಾಬಿಯಲ್ಲಿ ಕೊನೆಯ ಬಾರಿಗೆ ಜಯಗಳಿಸಿದ್ದರು. ಅಲ್ಲಿಂದ ಬಹುಕಾಲದವರೆಗೆ ಪ್ರಶಸ್ತಿ ಬರ ಅನುಭವಿಸಿದ್ದರು.

ADVERTISEMENT

ಹೀರೋ ವುಮೆನ್ಸ್ ಇಂಡಿಯನ್ ಓಪನ್‌ ಮತ್ತು ಕತಾರ್ ಲೇಡೀಸ್ ಓಪನ್‌ನಲ್ಲಿ ಕಿರೀಟ ಧರಿಸಿದ್ದಾರೆ.

ಎಲ್‌ಇಟಿಯಲ್ಲಿ ಅದಿತಿಯ ದಾಖಲೆಯು ತುಂಬಾ ಉತ್ತಮವಾಗಿದೆ. ಏಕೆಂದರೆ ಅವರು ನಾಲ್ಕು ಬಾರಿ ಗೆದ್ದಿರುವುದಲ್ಲದೆ, 20 ಸಲ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಗೆಲುವಿನೊಂದಿಗೆ, ಮೊದಲ ಎಲ್‌ಪಿಜಿಎಯನ್ನು ಜಯಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಒಂದೊಮ್ಮೆ ಕನಸು ಕೈಗೂಡಿದರೆ ಈ ಸಾಧನೆ ಮಾಡಿದ ಭಾರತದ ಮೊದಲ ಗಾಲ್ಫ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದಿತಿ ಅವರು ಕೂದಲೆಳೆಯ ಅಂತರದಲ್ಲಿ ಪದಕವನ್ನು ಕೈತಪ್ಪಿಸಿಕೊಂಡಿದ್ದರು. ಅಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದರು.

ಅದಿತಿ ನಾಲ್ಕು ಸುತ್ತುಗಳಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅವರು ಕ್ರಮವಾಗಿ 67, 70, 69 ಮತ್ತು 74 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿ ಒಟ್ಟು 280 ಸ್ಕೋರ್‌ ಮಾಡಿದರು.

ಇಂಗ್ಲೆಂಡ್‌ನ ಅಲೈಸ್‌ ಹೆವ್ಸನ್‌ ಮತ್ತು ಥಾಯ್ಲೆಂಡ್‌ನ ಅಪ್ರಿಲ್ ಅಂಗುರಸರನೀ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಕಣದಲ್ಲಿದ್ದ ಭಾರತದ ಯುವ ಆಟಗಾರ್ತಿ ಅವನಿ ಪ್ರಶಾಂತ್ ಅವರು ಅಂತಿಮ ಸುತ್ತಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಜಂಟಿ ಒಂಬತ್ತನೇ ಸ್ಥಾನ ಪಡೆದರು. ಅಮನ್‌ದೀಪ್ ದ್ರಾಲ್ (77) ಜಂಟಿ 55 ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.