ADVERTISEMENT

Women's World Cup:ಅಗ್ರಸ್ಥಾನಕ್ಕೆ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪೈಪೋಟಿ ಇಂದು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 22:54 IST
Last Updated 24 ಅಕ್ಟೋಬರ್ 2025, 22:54 IST
   

ಇಂದೋರ್‌: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ಇಲ್ಲಿ ಮುಖಾಮುಖಿಯಾಗಲಿವೆ.

ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾಯ್ದಿರಿಸಿರುವ ಉಭಯ ತಂಡಗಳಿಗೆ ಇದು ಲೀಗ್‌ ಹಂತದಲ್ಲಿ ಕೊನೆಯ ಪಂದ್ಯವಾಗಿವೆ. ಎರಡೂ ತಂಡಗಳಿಗೂ ಈ ಹಣಾಹಣಿ ಪ್ರತಿಷ್ಠೆಯಾಗಿದ್ದು, ಗೆದ್ದ ತಂಡವು ಅಗ್ರಸ್ಥಾನಕ್ಕೇರಲಿದೆ.

ಏಳು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಟೂರ್ನಿಯಲ್ಲಿ ಅಜೇಯವಾಗಿದೆ. ಆಡಿರುವ ಆರು ಪಂದ್ಯಗಳಲ್ಲಿ ಐದನ್ನು ಗೆದ್ದರೆ, ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಒಟ್ಟು 11 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.

ADVERTISEMENT

ದಕ್ಷಿಣ ಆಫ್ರಿಕಾ ತಂಡವು ಆರು ಪಂದ್ಯಗಳಲ್ಲಿ ಐದು ಗೆದ್ದು, ಒಂದರಲ್ಲಿ ಸೋತಿದೆ. ಒಟ್ಟು 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನ ಪಡೆಯುವತ್ತ ಚಿತ್ತ ಹರಿಸಿದೆ. 

ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿರುವ ಎಲಿಸಾ ಹೇಲಿ ವಿರುದ್ಧ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ನಾಯಕಿ, ಆರಂಭಿಕ ಆಟಗಾರ್ತಿ ಮತ್ತು ವಿಕೆಟ್ ಕೀಪರ್ ಆಗಿ ‘ತ್ರಿವಳಿ’ ಪಾತ್ರಗಳನ್ನು ನಿರ್ವಹಿಸುತ್ತಿರುವ ಹೇಲಿ ಅವರು ಬುಧವಾರ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ತಾಲೀಮು ವೇಳೆ ‌ಕಾಲಿನ ಸ್ನಾಯುಗಳ ನೋವಿಗೆ ಒಳಗಾಗಿದ್ದರು. ಹೀಗಾಗಿ, ಇಂಗ್ಲೆಂಡ್‌ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಫಿಟ್‌ ಆಗಿದ್ದು, ಹ್ಯಾಟ್ರಿಕ್‌ ಶತಕದತ್ತ ದೃಷ್ಟಿ ನೆಟ್ಟಿದ್ದಾರೆ. 

ಪಂದ್ಯ ಆರಂಭ: ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಹಾಟ್‌ಸ್ಟಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.