ADVERTISEMENT

ಏಷ್ಯನ್‌ ಒಲಿಂಪಿಕ್ಸ್‌ ಬಾಕ್ಸಿಂಗ್‌ ಅರ್ಹತಾ ಟೂರ್ನಿ: ಅಮಿತ್‌ಗೆ ಟೋಕಿಯೊ ಟಿಕೆಟ್‌

ಮೇರಿ ಕೋಮ್‌ಗೆ ಎರಡನೇ ಬಾರಿ ಅವಕಾಶ

ಪಿಟಿಐ
Published 9 ಮಾರ್ಚ್ 2020, 21:45 IST
Last Updated 9 ಮಾರ್ಚ್ 2020, 21:45 IST
ಅಮಿತ್‌ ಪಂಗಲ್‌
ಅಮಿತ್‌ ಪಂಗಲ್‌   

ಅಮಾನ್‌, ಜೋರ್ಡಾನ್‌: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಗಲ್‌ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೆ, 2012ರ ಲಂಡನ್‌ ಒಲಿಂಪಿಕ್ಸ್‌ ಕಂಚು ವಿಜೇತೆ ಮೇರಿ ಕೋಮ್‌ ಎರಡನೇ ಬಾರಿ ಅವಕಾಶ ಗಿಟ್ಟಿಸಿದರು. ಸಿಮ್ರನ್‌ಜೀತ್‌ ಕೌರ್‌ ಕೂಡ ಮೊದಲ ಬಾರಿ ಒಲಿಂಪಿಕ್ಸ್‌ ಅವಕಾಶ ಪಡೆದರು.

ಸೋಮವಾರ ನಡೆದ ಏಷ್ಯನ್‌ ಒಲಿಂಪಿಕ್ಸ್‌ ಬಾಕ್ಸಿಂಗ್‌ ಅರ್ಹತಾ ಟೂರ್ನಿಯ 52 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಪಂಗಲ್‌ ‘ಪರಿಚಿತ ಎದುರಾಳಿ’ ಕಾರ್ಲೊ ಪಾಲಮ್‌ (ಫಿಲಿಪೀನ್ಸ್‌) ಅವರನ್ನು ಸೋಲಿಸಿದರು.

ಮಹಿಳೆಯರ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ, ಎಂಟರಘಟ್ಟದ ಹಣಾಹಣಿಯಲ್ಲಿ ಫಿಲಿಪೀನ್ಸ್‌ನ ಐರಿಷ್‌ ಮ್ಯಾಗ್ನೊ ಎದುರು 5–0ಯಿಂದ ಗೆದ್ದರು.

ADVERTISEMENT

ಮುಂದಿನ ಬೌಟ್‌ನಲ್ಲಿ ಮೇರಿ, ಚೀನಾದ ಯುವಾನ್‌ ಚಾಂಗ್‌ ಅವರನ್ನು ಎದುರಿಸುವರು.

ಮಹಿಳೆಯರ 60 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸಿಮ್ರನ್‌ಜೀತ್‌, 5–0ಯಿಂದ ಮಂಗೋಲಿಯಾದ ನಾಮೂನ್‌ ಮೊಂಕೊರ್‌ ಅವರನ್ನು ಸೋಲಿಸಿದರು. ಆದರೆ ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಸಾಕ್ಷಿ ಚೌಧರಿ, ಒಲಿಂಪಿಕ್ಸ್‌ ಟಿಕೆಟ್‌ ಪಡೆಯಲು ವಿಫಲರಾದರು. 57 ಕೆ.ಜಿ ವಿಭಾಗ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾ ಎದುರಾಳಿಗೆ ಸೋತರು.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಮನಿಷ್‌ ಕೌಶಿಕ್‌,63 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರೂ ಅವರಿಗೆ ಅರ್ಹತೆಯ ಅವಕಾಶ ಜೀವಂತವಾಗಿಯೇ ಇದೆ.

ಅಗ್ರ ಶ್ರೇಯಾಂಕದ ಅಮಿತ್‌, ಆಯ್ಕೆಗಾರರಲ್ಲಿ ಭಿನ್ನತೀರ್ಪು ಕಂಡ ಫಲಿತಾಂಶದಲ್ಲಿ 4–1 ರಿಂದ ಪಾಲಮ್‌ ವಿರುದ್ಧ ಜಯಗಳಿಸಿದರು. ಈ ಹಿಂದೆ, 2018ರ ಏಷ್ಯನ್‌ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಮತ್ತು ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ ಕ್ವಾರ್ಟರ್‌ಫೈನಲ್‌ನಲ್ಲೂ ಅಮಿತ್‌, ಇದೇ ಎದುರಾಳಿಯನ್ನು ಮಣಿಸಿದ್ದರು.

‘ಇಂದಿನ ಗೆಲುವನ್ನು ನನ್ನ ಸಂಬಂಧಿ ರಾಜ್‌ ನಾರಾಯಣ್‌ ಅವರಿಗೆ ಅರ್ಪಿಸುತ್ತೇನೆ. ನನ್ನಲ್ಲಿ ಧೈರ್ಯ ತುಂಬಿದವರು ಅವರು. ಮಾರ್ಚ್‌ 9 ಅವರ ಜನ್ಮದಿನ’ ಎಂದು ಪಂಗಲ್‌ ಗೆಲುವಿನ ನಂತರ ಹೇಳಿದರು. ಅಮಿತ್‌ ಏಷ್ಯನ್‌ ಗೇಮ್ಸ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನ ಸ್ವರ್ಣ ವಿಜೇತರಾಗಿದ್ದಾರೆ.

ಅವರ ಮುಂದಿನ ಎದುರಾಳಿ ಜಿಯಾನ್‌ಗುವಾನ್‌ ಹು. ಚೀನಾದ ಹು ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತರಾದ ಸಕೆನ್‌ ಬಿಬೊಸ್ಸಿನೊವ್‌ (ಕಜಕಸ್ತಾನ) ಅವರ ಮೇಲೆ ಅಚ್ಚರಿಯ ಜಯ
ಸಾಧಿಸಿದರು.

ಮನಿಷ್‌ ಕೌಶಿಕ್‌, ತೀವ್ರ ಹೋರಾಟ ಕಂಡ ಕ್ವಾರ್ಟರ್‌ಫೈನಲ್‌ನಲ್ಲಿ 2–3 ಅಂತರದಿಂದ ಮೂರನೇ ಶ್ರೇಯಾಂಕದ ಚಿನ್‌ಝೊರಿಗ್‌ ಬಾಟರ್‌ಸುಖ್‌ (ಮಂಗೋಲಿಯಾ) ಅವರಿಗೆ ಶರಣಾದರು. ಆದರೆ 63 ಕೆ.ಜಿ ವಿಭಾಗದಲ್ಲಿ ಅಗ್ರ ಆರು ಬಾಕ್ಸರ್‌ಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆಯ ಅವಕಾಶವಿದೆ. ಹೀಗಾಗಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋತವರ ಮಧ್ಯೆ ‘ಬಾಕ್ಸ್ ಆಫ್‌’ನಲ್ಲಿ ಗೆದ್ದರೂ ಮನಿಷ್‌ ಕೂಡ ಅರ್ಹತೆ ಪಡೆಯಲಿದ್ದಾರೆ.

ಮನಿಷ್‌ ಮೇಲೆ ಗೆದ್ದ ಮಂಗೋಲಿಯಾದ ಅನುಭವಿ ಸ್ಪರ್ಧಿ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದರು.ಕೌಶಿಕ್‌ ಉತ್ತಮ ಆರಂಭ ಮಾಡಿದರೂ, ಮಂಗೋಲಿಯಾ ಬಾಕ್ಸರ್‌ ಕುದುರಿಕೊಂಡ ನಂತರ ಮೇಲುಗೈ ಸಾಧಿಸಿದರು. ವಿಶೇಷವಾಗಿ ಕೊನೆಯ ಮೂರು ನಿಮಿಷಗ ಪ್ರಹಾರಗಳನ್ನು ನಡೆಸುತ್ತ ಹೋದರು.

ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಸಾಕ್ಷಿ ಚೌಧರಿ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದರು. ಅವರು ಮಹಿಳೆಯರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯಾದ ಇಮ್‌ ಏಜಿ ಅವರಿಗೆ ಮಣಿದರು.

19 ವರ್ಷದ ಸಾಕ್ಷಿ, ಇಮ್‌ ಎದುರು 0–5 ರಿಂದ ಸೋತರು. ಕೊರಿಯಾದ ಬಾಕ್ಸರ್‌ ಕೂಡ ಮಾಜಿ ಯೂತ್‌ ಚಾಂಪಿಯನ್‌ ಆಗಿದ್ದು, ಮುಂದಿನ ಸುತ್ತಿನಲ್ಲಿ ಜಪಾನ್‌ನ ಐರಿ ಸೆನಾ ಎದುರು ಕಣಕ್ಕಿಳಿಯಲಿದ್ದಾರೆ. ಈ ವಿಭಾಗದಲ್ಲಿ (57 ಕೆ.ಜಿ) ಸೆಮಿಫೈನಲ್‌ ತಲುಪಿದವರು ಮಾತ್ರ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಮುಂದಿನ ಮೇ ತಿಂಗಳಲ್ಲಿ ವಿಶ್ವ ಅರ್ಹತಾ ಸುತ್ತಿನ ಟೂರ್ನಿ ನಡೆಯಲಿದ್ದು, ಸಾಕ್ಷಿ ಆ ಟೂರ್ನಿಗೆ ಆಯ್ಕೆಯಾದಲ್ಲಿ ಅರ್ಹತೆಗೆ ಪ್ರಯತ್ನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.