ADVERTISEMENT

ನಾರ್ವೆ ಚೆಸ್‌ ಟೂರ್ನಿ: ಕಾರ್ಲ್‌ಸನ್‌ ಮಣಿಸಿ ಅಗ್ರಸ್ಥಾನಕ್ಕೇರಿದ ಆನಂದ್

ಪಿಟಿಐ
Published 6 ಜೂನ್ 2022, 16:45 IST
Last Updated 6 ಜೂನ್ 2022, 16:45 IST
ವಿಶ್ವನಾಥನ್‌ ಆನಂದ್
ವಿಶ್ವನಾಥನ್‌ ಆನಂದ್   

ಸ್ಟಾವೆಂಜರ್‌, ನಾರ್ವೆ: ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಮಣಿಸಿ ಅಗ್ರಸ್ಥಾನಕ್ಕೇರಿದರು.

ಭಾನುವಾರ ನಡೆದ ಪಂದ್ಯದಲ್ಲಿ ಚಾಣಾಕ್ಷ ನಡೆಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌, ಕ್ಲಾಸಿಕಲ್‌ ಪಂದ್ಯದಲ್ಲಿ 40 ನಡೆಗಳ ಬಳಿಕ ಡ್ರಾ ಸಾಧಿಸಿದರು. ಫಲಿತಾಂಶ ನಿರ್ಣಯಿಸಲು ನಡೆದಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ನಲ್ಲಿ 50 ನಡೆಗಳಲ್ಲಿ ಜಯ ಸಾಧಿಸಿದರು.

ಟೂರ್ನಿಯಲ್ಲಿ ಇನ್ನು ನಾಲ್ಕು ಸುತ್ತುಗಳು ಬಾಕಿಯಿದ್ದು, ಆನಂದ್‌ 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 9.5 ಪಾಯಿಂಟ್ಸ್‌ ಹೊಂದಿರುವ ಕಾರ್ಲ್‌ಸನ್‌ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ಅಮೆರಿಕದ ವೆಸ್ಲಿ ಸೊ ಮತ್ತು ಅಜರ್‌ಬೈಜಾನ್‌ನ ಶಕ್ರಿಯಾರ್ ಮಮೆದ್ಯರೋವ್ ತಲಾ 8.5 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಐದನೇ ಸುತ್ತಿನ ಪಂದ್ಯದಲ್ಲಿ ಸೊ ಅವರು ಮಮೆದ್ಯರೋವ್‌ ಎದುರು ಪರಾಭವಗೊಂಡರು.

ಇತರ ಪಂದ್ಯಗಳಲ್ಲಿ ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಮತ್ತು ನಾರ್ವೆಯ ಆರ್ಯನ್‌ ತರಿ ಕ್ರಮವಾಗಿ ಅಜರ್‌ಬೈಜಾನ್‌ನ ತೈಮೂರ್‌ ರಜಬೊವ್ ಹಾಗೂ ಚೀನಾದ ಹವೊ ವಾಂಗ್‌ ಎದುರು ಜಯ ಸಾಧಿಸಿದರು.

ಬಲ್ಗೇರಿಯದ ವ್ಯಾಸೆಲಿನ್‌ ಟೊಪಾಲೋವ್‌ ಅವರನ್ನು ಮಣಿಸಿದ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್ ತಮ್ಮ ಪಾಯಿಂಟ್‌ಗಳನ್ನು ಏಳಕ್ಕೆ ಹೆಚ್ಚಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.