ADVERTISEMENT

ಲೆಜೆಂಡ್ಸ್ ಆಫ್‌ ಚೆಸ್: ಆನಂದ್‌ಗೆ ಸೋಲುಣಿಸಿದ ಪೀಟರ್ ಸ್ವಿಡ್ಲರ್

ಪಿಟಿಐ
Published 22 ಜುಲೈ 2020, 16:10 IST
Last Updated 22 ಜುಲೈ 2020, 16:10 IST
ಮ್ಯಾಗ್ನಸ್ ಕಾರ್ಲ್‌ಸನ್ –ಪಿಟಿಐ ಚಿತ್ರ
ಮ್ಯಾಗ್ನಸ್ ಕಾರ್ಲ್‌ಸನ್ –ಪಿಟಿಐ ಚಿತ್ರ   

ಚೆನ್ನೈ: ಭರವಸೆ ಮೂಡಿಸಿದ್ದ ಭಾರತದ ವಿಶ್ವನಾಥನ್ ಆನಂದ್ ಅವರು ಆನ್‌ಲೈನ್ ಮೂಲಕ ನಡೆಯುತ್ತಿರುವಮ್ಯಾಗ್ನಸ್ ಕಾರ್ಲ್‌ಸನ್ ಲೆಜೆಂಡ್ಸ್ ಆಫ್‌ ಚೆಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯ ಮೊದಲ ದಿನ ರಷ್ಯಾದ ಪೀಟರ್ ಸ್ವಿಡ್ಲರ್ ಎದುರಿನ ಹಣಾಹಣಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 1.5‍–2.5ರ ಸೋಲುಂಡಿದ್ದಾರೆ.

ಮೇ ತಿಂಗಳಲ್ಲಿ ನಡೆದ ನೇಷನ್ಷ್ ಕಪ್ ಆನ್‌ಲೈನ್ ಟೂರ್ನಿಯಲ್ಲಿ ಕೊನೆಯದಾಗಿ ಕಣಕ್ಕೆ ಇಳಿದಿದ್ದ ಆನಂದ್ ಮಂಗಳವಾರದ ಪಂದ್ಯದ ಮೊದಲ ಮೂರು ಸುತ್ತುಗಳಲ್ಲಿ ಡ್ರಾ ಸಾಧಿಸಿದ್ದರು. ಆದರೆ ಕೊನೆಯ ಸುತ್ತಿನಲ್ಲಿ ಸೋತು ಹೊರಬಿದ್ದರು. ಬೆಸ್ಟ್ ಆಫ್ ಫೋರ್ ಮಾದರಿಯ ಮೊದಲ ಮೂರು ಸುತ್ತುಗಳಲ್ಲಿ ಇಬ್ಬರೂ ಆಟಗಾರರು ಸಮಬಲದ ಹೋರಾಟ ಪ್ರದರ್ಶಿಸಿ 1.5 ಪಾಯಿಂಟ್ ಕಲೆ ಹಾಕಿದರು. ಅಂತಿಮ ಸುತ್ತಿನಲ್ಲಿ ಸ್ವಿಡ್ಲರ್ ಅಮೋಘ ಆಟವಾಡಿ ಆನಂದ್‌ ಅವರನ್ನು ಹಿಮ್ಮೆಟ್ಟಿಸಿದರು.

ಖ್ಯಾತ ಚೆಸ್ ಪಟು ರಷ್ಯಾದ ಬೋರಿಸ್ ಜೆಲ್ಫಾಂಡ್ ನಿರೀಕ್ಷೆಗೆ ತಕ್ಕ ಆಟವಾಡಿಮೊದಲ ದಿನ ಗಮನ ಸೆಳೆದರು. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಚೀನಾದ ಡಿಂಗ್ ಲಿರೆನ್ ವಿರುದ್ಧ ಅವರು 3–1ರ ಜಯ ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ 3–1ರಿಂದ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಅವರನ್ನು ಮಣಿಸಿದರು. ರಷ್ಯಾದ ಇಯಾನ್ ನೆಪೊಮಿನಿಯಾಚಿ ಹಾಗೂ ಹಂಗರಿಯ ಪೀಟರ್ ಲೆಕೊ ಅವರೂ ಗೆಲುವು ಸಾಧಿಸಿದರು.

ADVERTISEMENT

ಮ್ಯಾಗ್ನಸ್ ಕಾರ್ಲ್‌ಸನ್ ಟೂರ್‌ನ ಭಾಗವಾಗಿಯೇ ನಡೆದಿದ್ದ ಚೆಸೇಬಲ್ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕಾರ್ಲ್‌ಸನ್, ಲಿರೆನ್, ನೆಪೊಮ್ಯಾಚಿ ಮತ್ತು ಗಿರಿ ಅವರು ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಗೆ ನೇರ ಪ್ರವೇಶ ಪಡೆದಿದ್ದರು. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವವರು ಆಗಸ್ಟ್ ಒಂಬತ್ತರಿಂದ 20ರ ವರೆಗೆ ನಡೆಯಲಿರುವ ‘ಮಹಾ ಫೈನಲ್‘ ಚೆಸ್ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.