
ಜೈಪುರ: ಮುಂಬೈ ತಂಡದ ಆರಂಭಿಕ ಆಟಗಾರ ಅಂಗ್‌ಕ್ರಿಶ್ ರಘುವಂಶಿ ಅವರು ಶುಕ್ರವಾರ ಉತ್ತರಾಖಂಡ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಕಠಿಣವಾದ ಕ್ಯಾಚ್ ಹಿಡಿಯಲು ಪ್ರಯತ್ನಿಸುವ ವೇಳೆ ಭುಜ ಮತ್ತು ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯಗೊಂಡು ಕಂಕಷನ್‌ಗೆ ಒಳಗಾಗಿದ್ದಾರೆ.
30ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಹಾಕಿದ ಎಸೆತದಲ್ಲಿ ಬಲಗೈ ಬ್ಯಾಟರ್ ಸೌರಭ್ ರಾವತ್ ಅವರು ಸ್ಲಾಗ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಡೀಪ್ ಮಿಡ್ ವಿಕೆಟ್‌ನಲ್ಲಿ ನಿಂತಿದ್ದ ರಘುವಂಶಿ ಮಿಡ್ ವಿಕೆಟ್ ಕಡೆಗೆ ವೇಗವಾಗಿ ಧಾವಿಸಿ ಒಂದು ಕೈಯಿಂದ ಕ್ಯಾಚ್ ಹಿಡಿಯಲು ಯತ್ನಿಸಿದರು. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದರು. ತಕ್ಷಣ ಫಿಜಿಯೊ ಮೈದಾನಕ್ಕೆ ಧಾವಿಸಿದರು.
ಅವರಿಗೆ ನಿಲ್ಲಲು ಸಾಧ್ಯವಾಗದ ಕಾರಣ ಸ್ಟ್ರೆಚರ್ ಮೂಲಕ ಅವರನ್ನು ಮೈದಾನದಿಂದ ಕರೆದೊಯ್ಯಲಾಯಿತು. ಬಳಿಕ ಆಂಬುಲೆನ್ಸ್‌ನಲ್ಲಿ ಹತ್ತಿರದ ಎಸ್‌ಡಿಎಂಎಚ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಗತ್ಯವಿರುವ ಸ್ಕ್ಯಾನಿಂಗ್‌ಗಳನ್ನು ಮಾಡುವುದರೊಂದಿಗೆ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
ಮುಂಬೈಗೆ ಜಯ: ಉತ್ತರಾಖಂಡ ವಿರುದ್ಧದ ಎಲೀಟ್ ಸಿ ಗುಂಪಿನ ಪಂದ್ಯವನ್ನು ಮುಂಬೈ 51 ರನ್‌ಗಳಿಂದ ಜಯಿಸಿತು. ಶಾರ್ದೂಲ್ ನಾಯಕತ್ವದ ಮುಂಬೈ ತಂಡಕ್ಕೆ ಇದು ಸತತ ಎರಡನೇ ಗೆಲುವು. ಬುಧವಾರ ಸಿಕ್ಕಿಂ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು.
ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ‘ಗೋಲ್ಡನ್ ಡಕ್’ ಆದರು. ಹಾರ್ದಿಕ್ ತಾಮೋರ್ (ಔಟಾಗದೇ 93;52ಎ, 4x7, 6x2) ಅವರ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 331 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಉತ್ತರಾಖಂಡ 9 ವಿಕೆಟ್‌ಗಳಿಗೆ 280 ರನ್ ಗಳಿಸಿ ಹೋರಾಟ ಮುಗಿಸಿತು. ಆರಂಭಿಕ ಆಟಗಾರ ಯುವರಾಜ್ ಚೌಧರಿ (96;96ಎ, 4x4, 6x4) ಅವರು ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ಮುಂಬೈ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 331 (ಮುಷೀರ್ ಖಾನ್ 55, ಸರ್ಫರಾಜ್ ಖಾನ್ 55, ಹಾರ್ದಿಕ್ ತಾಮೋರ್ ಔಟಾಗದೇ 93, ಶಮ್ಸ್ ಮುಲಾನಿ 48; ದೇವೇಂದ್ರ ಸಿಂಗ್ ಬೋರಾ 74ಕ್ಕೆ 3). ಉತ್ತರಾಖಂಡ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 280 (ಯುವರಾಜ್ ಚೌಧರಿ 96, ಜಗದೀಶ ಸಚ್ಚಿತ್ 51; ಶಾರ್ದೂಲ್ ಠಾಕೂರ್ 28ಕ್ಕೆ 2, ಓಂಕಾರ್ ತರ್ಮಲೆ 40ಕ್ಕೆ 2, ಮುಷೀರ್ ಖಾನ್ 57ಕ್ಕೆ 2). ಪಂದ್ಯದ ಆಟಗಾರ: ಹಾರ್ದಿಕ್ ತಾಮೋರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.