ಕೊಚ್ಚಿ: ಮಿಂಚಿನ ಓಟದ ಪ್ರದರ್ಶನ ನೀಡಿದ ಒಡಿಶಾದ ಸ್ಪ್ರಿಂಟರ್ ಅನಿಮೇಶ್ ಕುಜೂರ್ ಅವರು ಫೆಡರೇಷನ್ ಕಪ್ ಸೀನಿಯರ್ ರಾಷ್ಟ್ರೀಯ ಅಥ್ಲೆಟಿಕ್ ಸ್ಪರ್ಧೆಗಳ 200 ಮೀ. ಓಟವನ್ನು ಗುರುವಾರ 20.40 ಸೆಕೆಂಡುಗಳಲ್ಲಿ ಪೂರೈಸಿ ರಾಷ್ಟ್ರೀಯ ದಾಖಲೆ ಮುರಿದರು.
ಈ ಹಿಂದೆ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ 21 ವರ್ಷ ವಯಸ್ಸಿನ ಕುಜೂರ್, ಕೂಟದ ಅಂತಿಮ ದಿನ ಅತ್ಯಮೋಘ ಓಟ ಓಡಿ, 2022ರಲ್ಲಿ ತೇನಿಪ್ಪಾಲಂನಲ್ಲಿ ಆಮ್ಲನ್ ಬೋರ್ಗೊಹೈನ್ ಸ್ಥಾಪಿಸಿದ್ದ 20.52 ಸೆ.ಗಳ ದಾಖಲೆ ಮುರಿದರು.
ರಿಲಯನ್ಸ್ ತಂಡ ಪ್ರತಿನಿಧಿಸುತ್ತಿರುವ ಬೊರ್ಗೊಹೈನ್ 20.80 ಸೆ.ಗಳಲ್ಲಿ ಓಟ ಕ್ರಮಿಸಿ ಎರಡನೇ ಸ್ಥಾನ ಪಡೆದರು. ತಮಿಳುನಾಡಿನ ರಾಹುಲ್ ಕುಮಾರ್ (20.85) ಮೂರನೇಯವರಾದರು.
ಏಷ್ಯಾದಲ್ಲಿ ಇದು ಈ ವರ್ಷದ ಶ್ರೇಷ್ಠ ಓಟವೆನಿಸಿತು. ಆದರೆ ಕುಜೂರ್ ಅವರಿಗೆ ವಿಶ್ವ ಚಾಂಪಿಯನ್‌ಷಿಪ್ ಅರ್ಹತಾ ಮಟ್ಟ (20.16 ಸೆ.) ತಪ್ಪಿಹೋಯಿತು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಎಎಫ್‌ಐ ನಿಗದಿಪಡಿಸಿದ 20.53 ಸೆ.ಗಳ ಮಾನದಂಡವನ್ನು ತಲುಪುವುದು ಕಷ್ಟವಾಗಲಿಲ್ಲ.
ದಾಖಲೆ ಸರಿಗಟ್ಟಿದ ಚಿತ್ರವೇಲ್:
ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ 17.37 ಮೀ. ಜಿಗಿದು ತಮ್ಮದೇ ರಾಷ್ಟ್ರೀಯ ದಾಖಲೆ ಸರಿಗಟ್ಟಿದರು. ಜೊತೆಯಲ್ಲೇ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದರು. ಈ ಕೂಟಕ್ಕೆ 17.22 ಮೀ. ಅರ್ಹತಾ ಮಟ್ಟ ನಿಗದಿ ಆಗಿತ್ತು.
ಜಿಂದಾಲ್ ಸಂಸ್ಥೆ ಪ್ರತಿನಿಧಿಸುತ್ತಿರುವ 23 ವರ್ಷ ವಯಸ್ಸಿನ ಚಿತ್ರವೇಲ್ ಈ ಹಿಂದೆ 2023ರ ಮೇ ತಿಂಗಳಲ್ಲಿ ಕ್ಯೂಬಾದ ಹವಾನಾದಲ್ಲಿ 17.37 ಮೀ. ಜಿಗಿದಿದ್ದರು.
ಈ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಮೂರನೇ ಯತ್ನದಲ್ಲೇ ತಂಜಾವೂರಿನ ಜಿಗಿತಗಾರ ದಾಖಲೆ ಸರಿಗಟ್ಟಿದರು.
ವಾಯುಪಡೆಯ ಅಬ್ದುಲ್ಲಾ ಅಬೂಬಕ್ಕರ್ (16.99 ಮೀ.) ಮತ್ತು ಜಿಂದಾಲ್‌ನ ಮೊಹಮ್ಮದ್ ಮುಹಸ್ಸಿನ್ (16.28) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಕಳೆದ ವರ್ಷದ ಬಹುತೇಕ ಅವಧಿಯಲ್ಲಿ ಪರದಾಡಿದ್ದ ಚಿತ್ರವೇಲ್ ಒಮ್ಮೆ ಮಾತ್ರ 17 ಮೀ.ಗಳ ಗಡಿ ದಾಟಿದ್ದರು.
ಈ ವರ್ಷ ಚಿತ್ರವೇಲ್, ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ 16.50 ಮೀ.ಗಳ ಸಾಧಾರಣ ಜಿಗಿತದಲ್ಲಿ ಚಿನ್ನ ಗೆದ್ದಿದ್ದರು. ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ಜಂಪ್ಸ್ ಸ್ಪರ್ಧೆಯಲ್ಲಿ 17.13 ಮೀ. ಜಿಗಿದು ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.