ADVERTISEMENT

ಏಷ್ಯನ್ ಅರ್ಹತಾ ಕುಸ್ತಿ ಟೂರ್ನಿ: ಒಲಿಂಪಿಕ್ಸ್‌ಗೆ ಅನ್ಶು, ಸೋನಂ ಮಲಿಕ್‌

ಕೈಗೂಡದ ಸಾಕ್ಷಿ ಕನಸು

ಪಿಟಿಐ
Published 10 ಏಪ್ರಿಲ್ 2021, 19:50 IST
Last Updated 10 ಏಪ್ರಿಲ್ 2021, 19:50 IST
ಅನ್ಶು ಮಲಿಕ್–ಟ್ವಿಟರ್ ಸಂಗ್ರಹ ಚಿತ್ರ
ಅನ್ಶು ಮಲಿಕ್–ಟ್ವಿಟರ್ ಸಂಗ್ರಹ ಚಿತ್ರ   

ಆಲ್ಮಾಟಿ, ಕಜಕಸ್ತಾನ: ಅಮೋಘ ಸಾಮರ್ಥ್ಯ ತೋರಿದ ಭಾರತದ ಅನ್ಶು ಮಲಿಕ್ ಹಾಗೂ ಸೋನಂ ಮಲಿಕ್ ಅವರು ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್ ಅರ್ಹತಾ ಕುಸ್ತಿ ಟೂರ್ನಿಯಲ್ಲಿ ಶನಿವಾರ ಫೈನಲ್‌ ತಲುಪುವ ಮೂಲಕ ಅವರು ಈ ಸಾಧನೆ ಮಾಡಿದರು.

ಇದುವರೆಗೆ ಭಾರತದ ಮೂವರು ಮಹಿಳಾ ಕುಸ್ತಿಪಟುಗಳು ಈ ಬಾರಿಯ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಂತಾಗಿದೆ. ವಿನೇಶಾ ಪೋಗಟ್ (53 ಕೆಜಿ ವಿಭಾಗ) ಅವರು 2019ರ ವಿಶ್ವಚಾಂಪಿಯನ್‌ಷಿಪ್ ಮೂಲಕ ಈಗಾಗಲೇ ಪ್ರವೇಶ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ಬಜರಂಗ್ ಪೂನಿಯಾ (65 ಕೆಜಿ), ರವಿ ದಹಿಯಾ (57 ಕೆಜಿ) ಹಾಗೂ ದೀಪಕ್ ಪೂನಿಯಾ (86 ಕೆಜಿ) ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿ ಯಲಿದ್ದಾರೆ. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನ್ಶು ಸಂಪೂರ್ಣ ಪ್ರಾಬಲ್ಯ ಮೆರೆದರೆ, 62 ಕೆಜಿ ವಿಭಾಗದಲ್ಲಿ ಸೋನಂ ಅವರು ಸಾಕ್ಷಿ ಮಲಿಕ್ ಅವರ ಒಲಿಂಪಿಕ್ಸ್ ಪ್ರವೇಶದ ಕನಸು ಭಗ್ನಗೊಳ್ಳುವಂತೆ ಮಾಡಿದರು. ಫೈನಲ್‌ ತಲುಪುವ ಹಾದಿಯಲ್ಲಿ ಅನ್ಶು, ತಾವು ಆಡಿದ ಕಣಕ್ಕಿಳಿದ ಮೂರು ಬೌಟ್‌ಗಳಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಸಾಧಿಸಿದರು.

ADVERTISEMENT

ಮೊದಲ ಹಣಾಹಣಿಯಲ್ಲಿ ಕೊರಿಯಾದ ಜಿಯುನ್‌ ಉಮ್‌, ಬಳಿಕ ಕಜಕಸ್ತಾನದ ಎಮ್ಮಾ ಟಿಸ್ಸಿನಾ ಅವರನ್ನು ಪರಾಭವಗೊಳಿಸಿದ ಅವರು, ಸೆಮಿಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಶೋಕಿದಾ ಅಖ್ಮೆದೊವಾ ಅವರನ್ನು ಮಣಿಸಿದರು. ಸೋನಂ ಅವರು ತಮ್ಮ ಮೊದಲ ಎದುರಾಳಿ ಚೀನಾದ ಜಿಯಾ ಲಾಂಗ್ ಎದುರು 5–2ರಿಂದ ಗೆದ್ದರೆ, ನಂತರ ತೈಪೇಯ ಸಿನ್‌ ಪಿಂಗ್ ಪಾಯ್ ಎದುರು ತಾಂತ್ರಿಕ ಶ್ರೇಷ್ಠತೆಯಿಂದ ಜಯಿಸಿ ಸೆಮಿಫೈನಲ್ ತಲುಪಿದರು.

ನಾಲ್ಕರ ಘಟ್ಟದ ಬೌಟ್‌ನಲ್ಲಿ ಆರಂಭದಲ್ಲಿ 0–6ರಿಂದ ಹಿನ್ನಡೆಯಲ್ಲಿ ದ್ದರೂ ಸತತ ಒಂಬತ್ತು ಪಾಯಿಂಟ್ಸ್ ಗಳಿಸಿ ಜಯಭೇರಿ ಮೊಳಗಿಸಿದರು.

ಸೀಮಾ ಬಿಸ್ಲಾ (50 ಕೆಜಿ) ತಾವು ಕಣಕ್ಕಿಳಿದಿದ್ದ ಮೂರು ಬೌಟ್‌ಗಳಲ್ಲಿ ಸೋಲು ಅನುಭವಿಸಿದರು.

68 ಕೆಜಿ ವಿಭಾಗದಲ್ಲಿ ನಿಶಾ ಸ್ವಲ್ಪದರಲ್ಲೇ ಒಲಿಂಪಿಕ್ಸ್ ಟಿಕೆಟ್ ತಪ್ಪಿಸಿಕೊಂಡರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ 3–1ರ ಮುನ್ನಡೆಯಲ್ಲಿದ್ದರೂ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಕಿರ್ಗಿಸ್ತಾನದ ಮೀರಿಮ್‌ ಜುಮಾನ ಜರೋಯಾ ಎದುರು ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.