ADVERTISEMENT

ಲಾಕ್‌ಡೌನ್‌ನಲ್ಲಿ ಓಡಾಟದ ವಿವರ ಕೇಳಿ 25 ಅಥ್ಲೀಟ್‌ಗಳಿಗೆ ನಾಡಾ ನೋಟಿಸ್

ಪಿಟಿಐ
Published 10 ಜೂನ್ 2020, 12:11 IST
Last Updated 10 ಜೂನ್ 2020, 12:11 IST
ಉದ್ದೀಪನ ಮದ್ದು ಪರೀಕ್ಷೆ
ಉದ್ದೀಪನ ಮದ್ದು ಪರೀಕ್ಷೆ   

ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ತಿರುಗಾಟದ ಅಥವಾ ವಾಸಸ್ಥಾನದ ವಿವರಗಳನ್ನು ಒದಗಿಸುವಲ್ಲಿ ವಿಫಲರಾದ 25 ಅಥ್ಲೀಟ್‌ಗಳಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನೋಟಿಸ್ ಜಾರಿ ಮಾಡಿದೆ.

ಕೊರೊನಾ ವೈರಸ್ ಸೋಂಕು ತಡೆಯಲು ಕೇಂದ್ರ ಸರ್ಕಾರವು ದೇಶದಲ್ಲಿ ಐದು ಹಂತಗಳಲ್ಲಿ ಲಾಕ್‌ಡೌನ್ ವಿಧಿಸಿತ್ತು. ಈ ಅವಧಿಯಲ್ಲಿ ಅಥ್ಲೀಟ್‌ಗಳು ತಮ್ಮ ವಾಸಸ್ಥಾನ, ಭೇಟಿಯಾದ ವ್ಯಕ್ತಿಗಳು, ಆಹಾರ, ವಿಹಾರಗಳ ಕುರಿತು ವಿವರಗಳನ್ನು ನೀಡುವುದು ಕಡ್ಡಾಯವಾಗಿತ್ತು.

ರಾಷ್ಟ್ರೀಯ ನೋಂದಾಯಿತ ಪರೀಕ್ಷಾ ಗುಂಪು (ಎನ್‌ಆರ್‌ಟಿಪಿ) ವಿಭಾಗದಲ್ಲಿ 110 ಪ್ರಮುಖ ಅಥ್ಲೀಟ್‌ಗಳಿಗೆ ನಾಡಾ ಈ ಸೂಚನೆ ನೀಡಿತ್ತು. ಆದರೆ ಅದರಲ್ಲಿ 25 ಮಂದಿ ಈ ತಮ್ಮ ವಿವರಗಳನ್ನು ನೀಡಿಲ್ಲ. ಆದ್ದರಿಂದ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಆ ಕ್ರೀಡಾಪಟುಗಳ ಹೆಸರುಗಳನ್ನು ನಾಡಾ ಬಹಿರಂಗ ಮಾಡಿಲ್ಲ.

ADVERTISEMENT

‘ನಾಡಾದ ಎನ್‌ಆರ್‌ಟಿಪಿ ಪಟ್ಟಿಯಲ್ಲಿರುವ ಅಥ್ಲೀಟ್‌ಗಳು ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಅವರು ಮೂರು ತಿಂಗಳು ಮೊದಲೇ ತಮ್ಮ ಭವಿಷ್ಯದ ಓಡಾಟ, ವಾಸದ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಈ ರೀತಿ ಮಾಡುವಲ್ಲಿ ವಿಫಲರಾದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅದರಲ್ಲಿ ಮೂವರಿಗೆ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯದ್ದಾಗಿವೆ. ಸಾಬೀತಾದರೆ ಅವರನ್ನು ನಾಲ್ಕು ವರ್ಷಗಳವರೆಗೆ ಅಮಾನತು ಮಾಡುವ ಸಾಧ್ಯತೆ ಇದೆ’ ಎಂದು ನಾಡಾ ಟ್ವೀಟ್ ಮಾಡಿದೆ.

‘ಸುಮಾರು 20 ರಿಂದ 25 ಅಥ್ಲೀಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಅವರು ತಾವು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲವೆಂದು ಸಾಬೀತು ಮಾಡಬೇಕು. ಲಾಕ್‌ಡೌನ್ ಇದ್ದಾಗಲೂ ಅವರು ತಮ್ಮ ವಿವರಗಳನ್ನು ಸಲ್ಲಿಸಲೇಬೇಕು’ ಎಂದು ನಾಡಾ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್ ಬಹುತೇಕ ಸಡಿಲಗೊಂಡಿರುವುದರಿಂದ ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ಶೀಘ್ರದಲ್ಲಿಯೇ ಅಥ್ಲೀಟ್‌ಗಳಿಂದ ಮಾದರಿ ಸಂಗ್ರಹಿಸುವ ಕಾರ್ಯವನ್ನು ನಾಡಾ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.