ADVERTISEMENT

ಏಷ್ಯಾ ಕಪ್‌ ಹಾಕಿ: ಕಜಾಕಸ್ಥಾನ ವಿರುದ್ಧ ಗೋಲುಗಳ ಮಳೆಗರೆದ ಭಾರತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ಕಜಾಕಸ್ತಾನ ತಂಡವನ್ನು ನಿರಾಯಾಸವಾಗಿ ಸೋಲಿಸಿದ ಭಾರತದ ಆಟಗಾರರ ಸಂಭ್ರಮ &nbsp;ಪಿಟಿಐ ಚಿತ್ರ</p></div>

ಕಜಾಕಸ್ತಾನ ತಂಡವನ್ನು ನಿರಾಯಾಸವಾಗಿ ಸೋಲಿಸಿದ ಭಾರತದ ಆಟಗಾರರ ಸಂಭ್ರಮ  ಪಿಟಿಐ ಚಿತ್ರ

   

ರಾಜಗೀರ್‌: ಸಂಪೂರ್ಣ ಏಕಪಕ್ಷೀಯವಾದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 15–0 ಗೋಲುಗಳಿಂದ ದುರ್ಬಲ ಕಜಾಕಸ್ತಾನ ತಂಡವನ್ನು ಸದೆಬಡಿಯಿತು. ಏಷ್ಯಾ ಕಪ್ ಟೂರ್ನಿಯಲ್ಲಿ ಈ ಮೊದಲೇ ಸೂಪರ್‌ ಫೋರ್‌ಗೆ ಸ್ಥಾನ ಕಾದಿರಿಸಿದ್ದ ಭಾರತ ಮೂರನೇ ಜಯವನ್ನು ಸೋಮವಾರ ನಿರಾಯಾಸವಾಗಿ ಸಾಧಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು.

ಅಭಿಷೇಕ್‌ ನಾಲ್ಕು ಗೋಲುಗಳನ್ನು (5ನೇ, 8ನೇ, 20ನೇ ಮತ್ತು 59ನೇ ನಿಮಿಷ) ಗಳಿಸಿದರೆ, ಸುಖಜೀತ್ ಸಿಂಗ್ (15ನೇ, 32ನೇ ಮತ್ತು 38ನೇ ನಿಮಿಷ) ಮತ್ತು ಜುಗರಾಜ್ ಸಿಂಗ್ (24ನೇ, 31ನೇ ಮತ್ತು 47ನೇ ನಿಮಿಷ) ಅವರೂ ಹ್ಯಾಟ್ರಿಕ್‌ ಪೂರೈಸಿದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ (26ನೇ), ಅಮಿತ್‌ ರೋಹಿದಾಸ್‌ (29ನೇ), ರಾಜಿಂದರ್ ಸಿಂಗ್ (32ನೇ), ಸಂಜಯ್ (54ನೇ) ಮತ್ತು ದಿಲ್‌ಪ್ರೀತ್ ಸಿಂಗ್ (55ನೇ ನಿಮಿಷ) ಅವರು ಇತರ ಐದು ಗೋಲುಗಳ ಕಾಣಿಕೆ ನೀಡಿದರು.

ADVERTISEMENT

ವಿರಾಮದ ವೇಳೆಗೆ ಆತಿಥೇಯ ತಂಡ 7–0 ಗೋಲುಗಳಿಂದ ಮುಂದಿತ್ತು.

ಭಾರತ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಚೀನಾ ಮತ್ತು ಜಪಾನ್‌ ತಂಡಗಳನ್ನು ಸೋಲಿಸಿತ್ತು. ಚೀನಾ ಕೂಡ ಇದೇ ಗುಂಪಿನಿಂದ ಸೂಪರ್ ಫೋರ್ ಹಂತ ತಲುಪಿದೆ. ‘ಬಿ’ ಗುಂಪಿನಿಂದ ಮಲೇಷ್ಯಾ ಮತ್ತು ಹಾಲಿ ಚಾಂಪಿಯನ್ ಕೊರಿಯಾ ಕೂಡ ಸೂಪರ್ ಫೋರ್ ಹಂತಕ್ಕೆ ಮುನ್ನಡೆದವು.

ಸೂಪರ್‌ ಫೋರ್‌ ಹಂತದ ಪಂದ್ಯಗಳ ನಂತರ ಅಗ್ರ ಎರಡು ತಂಡಗಳು ಭಾನುವಾರ ನಡೆಯುವ ಫೈನಲ್‌ನಲ್ಲಿ ಆಡಲಿವೆ.

ಜಪಾನ್‌ ನಿರ್ಗಮನ: ಇದಕ್ಕೆ ಮೊದಲು ದಿನದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಪಂದ್ಯದಲ್ಲಿ ಬಲಿಷ್ಠ ಜಪಾನ್‌ ಎದುರು 2–2ರಿಂದ ಡ್ರಾ ಮಾಡಿಕೊಂಡ ಚೀನಾ, ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.

ಚೀನಾ ತಾನು ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಡ್ರಾ ಹಾಗೂ ಸೋಲಿನೊಂದಿಗೆ 4 ಅಂಕ ಸಂಪಾದಿಸಿತ್ತು. ಜಪಾನ್‌ ತಂಡವೂ ಇಷ್ಟೇ ಅಂಕ ಹೊಂದಿದ್ದರೂ, ಟೂರ್ನಿಯಲ್ಲಿ ಹೆಚ್ಚು ಗೋಲು (18) ಹೊಡೆದಿದ್ದ ಚೀನಾಕ್ಕೆ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶ ದಕ್ಕಿತು.

ಮಲೇಷ್ಯಾ, ಕೊರಿಯಾ ಮುನ್ನಡೆ: ಬಿ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ 15–0 ಯಿಂದ ಚೀನಾ ತೈಪೆ ತಂಡವನ್ನು ಲೀಲಾಜಾಲವಾಗಿ ಸೋಲಿಸಿದರೆ, ಕೊರಿಯಾ 5–1 ಗೋಲುಗಳಿಂದ ಬಾಂಗ್ಲಾದೇಶ ಎದುರು ಗೆಲುವು ಸಾಧಿಸಿತು.

ಗುಂಪು ಹಂತದ ಎಲ್ಲ ಮೂರು ಪಂದ್ಯಗಳನ್ನು ಗೆದ್ದ ಮಲೇಷ್ಯಾ 9 ಪಾಯಿಂಟ್ಸ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಅದರೊಂದಿಗೆ ಆತ್ಮವಿಶ್ವಾಸದಿಂದಲೇ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು. ದಕ್ಷಿಣ ಕೊರಿಯಾ ಎರಡು ಗೆಲುವಿನೊಂದಿಗೆ (6 ಪಾಯಿಂಟ್ಸ್‌) ಸೂಪರ್‌ ಫೋರ್ ಹಂತಕ್ಕೆ ಪ್ರವೇಶಿಸಿತು.

ಬಾಂಗ್ಲಾದೇಶ ಹಾಗೂ ಚೀನಾ ತೈಪೆ ತಂಡಗಳು ಟೂರ್ನಿಯಿಂದ ನಿರ್ಗಮಿಸಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.