ADVERTISEMENT

ಏಷ್ಯಾ ಕಪ್ ಹಾಕಿ: ಭಾರತ ರನ್ನರ್ಸ್‌ ಅಪ್‌

ಚಾಂಪಿಯನ್‌ ಚೀನಾ ಮಹಿಳೆಯರಿಗೆ ವಿಶ್ವಕಪ್‌ ಟಿಕೆಟ್‌

ಪಿಟಿಐ
Published 14 ಸೆಪ್ಟೆಂಬರ್ 2025, 16:02 IST
Last Updated 14 ಸೆಪ್ಟೆಂಬರ್ 2025, 16:02 IST
<div class="paragraphs"><p>ಫೈನಲ್‌ ಪಂದ್ಯದಲ್ಲಿ ಭಾರತ (ನೀಲಿ) ಮತ್ತು ಚೀನಾ ಆಟಗಾರ್ತಿಯರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು –ಹಾಕಿ ಇಂಡಿಯಾ ಎಕ್ಸ್‌ ಚಿತ್ರ</p></div>

ಫೈನಲ್‌ ಪಂದ್ಯದಲ್ಲಿ ಭಾರತ (ನೀಲಿ) ಮತ್ತು ಚೀನಾ ಆಟಗಾರ್ತಿಯರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು –ಹಾಕಿ ಇಂಡಿಯಾ ಎಕ್ಸ್‌ ಚಿತ್ರ

   

ಹಾಂಗ್‌ಝೌ (ಚೀನಾ): ಭಾರತ ಮಹಿಳಾ ತಂಡವು ಭಾನುವಾರ ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಚೀನಾ ವಿರುದ್ಧ 1–4 ಗೋಲುಗಳಿಂದ ಪರಾಭವಗೊಂಡು, ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಯಿತು.

ಈ ಸೋಲಿನೊಂದಿಗೆ ಸಲೀಮಾ ಟೆಟೆ ಬಳಗವು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಸುವರ್ಣಾವಕಾಶವನ್ನು ಕಳೆದುಕೊಂಡಿತು. ಚಾಂಪಿಯನ್‌ ಚೀನಾ ತಂಡವು ವಿಶ್ವಕಪ್‌ಗೆ ಟಿಕೆಟ್‌ ‍ಪಡೆದುಕೊಂಡಿತು. 

ADVERTISEMENT

ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಫಾರ್ವರ್ಡ್‌ ಆಟಗಾರ್ತಿ ನವನೀತ್‌ ಅವರು ಮೊದಲ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಆತಿಥೇಯರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದರು. 

ನಂತರದಲ್ಲಿ ಚೀನಾ ಗಳಿಸಿದ್ದ ಸತತ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಅವಕಾಶವನ್ನು ಯಶಸ್ವಿಯಾಗಿ ತಡೆದ ಭಾರತದ ಆಟಗಾರ್ತಿಯರು 21ನೇ ನಿಮಿಷದವರೆಗೆ ಮುನ್ನಡೆ ಕಾಯ್ದುಕೊಂಡರು. ಆದರೆ, ನಾಲ್ಕನೇ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಜಿಕ್ಸಿಯಾ ಔ ಅವರು ಚೆಂಡನ್ನು ಗುರಿ ಸೇರಿಸಿದ್ದರಿಂದ ಉಭಯ ತಂಡಗಳ ಸ್ಕೋರ್‌ ಸಮಬಲಗೊಂಡಿತು. 

41ನೇ ನಿಮಿಷದಲ್ಲಿ ಹಾಂಗ್ ಲಿ ಅವರು ಫೀಲ್ಡ್‌ ಗೋಲು ಬಾರಿಸಿ ಆತಿಥೇಯ ತಂಡಕ್ಕೆ 2–1 ಮುನ್ನಡೆ ಒದಗಿಸಿದರು. ನಂತರದಲ್ಲಿ ಮೀರಾಂಗ್ ಝೌ (51ನೇ ನಿಮಿಷ) ಮತ್ತು ಜಿಯಾಕಿ ಜಾಂಗ್ (53ನೇ ನಿ) ಗೋಲು ತಂದಿತ್ತು, ಚೀನಾ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು. 

ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತಕ್ಕೆ ಇದು ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಸೂಪರ್‌ ಫೋರ್‌ ಹಂತದಲ್ಲೂ 1–4 ಗೋಲುಗಳಿಂದ ಭಾರತ ಪರಾಭವಗೊಂಡಿತ್ತು. 

ಜಪಾನ್‌ಗೆ ಗೆಲುವು: ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ತಂಡವು 2–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.