ADVERTISEMENT

ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಇಳವೆನಿಲ್‌– ಅರ್ಜುನ್‌ ಜೋಡಿಗೆ ಸ್ವರ್ಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:44 IST
Last Updated 8 ಫೆಬ್ರುವರಿ 2026, 23:44 IST
ಇಳವೆನಿಲ್‌ ವಳರಿವನ್‌ ಹಾಗೂ ಅರ್ಜುನ್‌ ಬಬೂತಾ
ಇಳವೆನಿಲ್‌ ವಳರಿವನ್‌ ಹಾಗೂ ಅರ್ಜುನ್‌ ಬಬೂತಾ   

ನವದೆಹಲಿ: ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ಇಳವೆನಿಲ್‌ ವಳರಿವನ್‌ ಹಾಗೂ ಅರ್ಜುನ್‌ ಬಬೂತಾ ಜೋಡಿಯು 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾನುವಾರ ಚಿನ್ನದ ‍ಪದಕಕ್ಕೆ ಗುರಿಯಿಟ್ಟಿತು. ಜೂನಿಯರ್ ವಿಭಾಗದಲ್ಲಿ ಹಿಮಾಂಶು ಧಿಲ್ಲಾನ್‌– ಶಾಂಭವಿ ಕ್ಷೀರಸಾಗರ ಅವರು ಸ್ವರ್ಣಕ್ಕೆ ಕೊರಳೊಡ್ಡಿದರು.

ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಶನಿವಾರ ಚಿನ್ನ ಗೆದ್ದಿದ್ದ ಇಳವೆನಿಲ್‌, ಮಿಶ್ರ ತಂಡದ ಸ್ಪರ್ಧೆಯ ಫೈನಲ್‌ನಲ್ಲಿ 253.4 ಅಂಕ ಕಲೆಹಾಕಿದರು. ಅರ್ಜುನ್‌ ಅವರು ಆರಂಭದಲ್ಲಿ ಕೊಂಚ ತಡವರಿಸಿದಂತೆ ಕಂಡರೂ, ನಂತರ ಲಯಕ್ಕೆ ಮರಳಿದರು. 24 ಶಾಟ್‌ಗಳಿಂದ 251.6 ಅಂಕ ಸಂಪಾದಿಸಿದರು. ಅದರೊಂದಿಗೆ, ಇವರಿಬ್ಬರು (505 ಅಂಕ) ದಕ್ಷಿಣ ಕೊರಿಯಾದ ಯೂಂಜಿ ಕ್ವಾನ್‌– ಕಿಮ್‌ ವೂರಿಮ್‌ ಜೋಡಿಯನ್ನು (501 ಅಂಕ) ಹಿಂದಿಕ್ಕಿದರು. ಜಪಾನ್‌ನ ಮಿಸಾಕಿ ನೊಬಾಟಾ ಹಾಗೂ ನವೋಯಾ ಒಕಾಡಾ ಅವರು (437) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾರತದ ಜೋಡಿಯು ಫೈನಲ್‌ಗೆ ಮೊದಲು ನಡೆದ ಅರ್ಹತಾ ಸುತ್ತಿನಲ್ಲಿಯೂ 632.8 ಅಂಕ ಗಳಿಸಿ, ಅಗ್ರಸ್ಥಾನ ಪಡೆದಿತ್ತು.

ADVERTISEMENT

ಕರ್ಣಿ ಸಿಂಗ್‌ ರೇಂಜ್‌ನಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ವೈಯಕ್ತಿಕವಾಗಿ ಚಿನ್ನ ಗೆದ್ದಿದ್ದ ಹಿಮಾಂಶು– ಶಾಂಭವಿ ಜೋಡಿ, ಜೂನಿಯರ್‌ ಏಷ್ಯನ್ ದಾಖಲೆ ನಿರ್ಮಿಸಿತು. ಈ ಜೋಡಿಯು ಫೈನಲ್‌ನಲ್ಲಿ 502.4 ಅಂಕ ಕಲೆಹಾಕಿತು. ಕಜಾಕಸ್ತಾನದ ಅಲೀನಾ ಸತ್ಪಯೆವಾ ಹಾಗೂ ಟಮೆರ್ಲನ್‌ ಕಬುಲೊವ್‌ (488.6 ಅಂಕ) ಬೆಳ್ಳಿ ಗೆದ್ದರೆ, ಮಾಲ್ದೀವ್ಸ್‌ನ ಈಶಾ ಶಾಹೀದ್‌– ಮಾಯಿಧ್‌ ಮೊಹಮದ್‌ (422.4) ಜೋಡಿ ಕಂಚು ತಮ್ಮದಾಗಿಸಿಕೊಂಡಿತು.

25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು ಮೂರೂ ಪದಕ ತಮ್ಮದಾಗಿಸಿಕೊಂಡರು. ಒಲಿಂಪಿಯನ್‌ ಗುರುಪ್ರೀತ್‌ ಸಿಂಗ್‌ ಚಿನ್ನ ಗೆದ್ದರೆ, ಹರ್ಷ ಗುಪ್ತಾ ಹಾಗೂ ಅಮನ್‌ಪ್ರೀತ್‌ ಸಿಂಗ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.