ADVERTISEMENT

ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್‌ ಬೀಚ್‌ ಕ್ರೀಡಾಕೂಟ ಮುಂದಕ್ಕೆ

ಪಿಟಿಐ
Published 11 ಜುಲೈ 2020, 15:09 IST
Last Updated 11 ಜುಲೈ 2020, 15:09 IST
olympic council of asia
olympic council of asia   

ಕುವೈತ್‌ ಸಿಟಿ: ಇದೇ ವರ್ಷದ ನವೆಂಬರ್‌ 28ರಿಂದ ಡಿಸೆಂಬರ್‌ 6ರವರೆಗೆ ನಿಗದಿಯಾಗಿದ್ದ ಏಷ್ಯನ್‌ ಬೀಚ್‌ ಕ್ರೀಡಾಕೂಟದ ಆರನೇ ಆವೃತ್ತಿಯನ್ನು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿದೆ.

ಏಷ್ಯಾ ಒಲಿಂಪಿಕ್‌ ಕೌನ್ಸಿಲ್ (ಒಸಿಎ)‌, ಶನಿವಾರ ಈ ನಿರ್ಧಾರ ಕೈಗೊಂಡಿದೆ.

‘ಕೊರೊನಾ ಸೋಂಕಿನ ಉಪಟಳ ಹೆಚ್ಚುತ್ತಲೇ ಇದೆ. ಸ್ಪರ್ಧಿಗಳು ಹಾಗೂ ಇತರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚೀನಾದ ಸನ್ಯಾದಲ್ಲಿ ನಿಗದಿಯಾಗಿದ್ದ ಕೂಟವನ್ನು ಮುಂದಕ್ಕೆ ಹಾಕಲಾಗಿದೆ. ಒಸಿಎ ಹಾಗೂ ಚೀನಾ ಒಲಿಂಪಿಕ್‌ ಸಮಿತಿಯು ಸುದೀರ್ಘವಾಗಿ ಚರ್ಚಿಸಿಯೇ ಈ ತೀರ್ಮಾನ ಕೈಗೊಂಡಿವೆ’ ಎಂದು ಒಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಕೊರೊನಾ ಬಿಕ್ಕಟ್ಟು ಬಗೆಹರಿದ ನಂತರ ಒಸಿಎ, ಚೀನಾ ಒಲಿಂಪಿಕ್‌ ಸಮಿತಿ ಹಾಗೂ ಸನ್ಯಾ ಏಷ್ಯನ್‌ ಬೀಚ್‌ ಕ್ರೀಡಾಕೂಟದ ಸಂಘಟನಾ ಸಮಿತಿಯ ಸದಸ್ಯರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ’ ಎಂದೂ ಹೇಳಲಾಗಿದೆ.

ಐದನೇ ಆವೃತ್ತಿಯ ಕ್ರೀಡಾಕೂಟವು 2016ರಲ್ಲಿ ವಿಯೆಟ್ನಾಂನಲ್ಲಿ ನಡೆದಿತ್ತು. ಚೊಚ್ಚಲ ಆವೃತ್ತಿಯ ಕೂಟಕ್ಕೆ ಇಂಡೊನೇಷ್ಯಾದ ಬಾಲಿ (2008) ಆತಿಥ್ಯ ವಹಿಸಿತ್ತು.2012ರಲ್ಲಿ ಚೀನಾದ ಹಯಾಂಗ್‌ನಲ್ಲಿ ಕೂಟ ಆಯೋಜನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.