ಬ್ಯಾಂಕಾಕ್: ಭಾರತದ ಬಾಕ್ಸರ್‌ಗಳು ಇಲ್ಲಿ ನಡೆದ 19 ಮತ್ತು 22 ವರ್ಷದೊಳಗಿನ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿದರು. 19 ವರ್ಷದೊಳಗಿನವರ ಭಾರತ ತಂಡವು 14 ಪದಕಗಳೊಂದಿಗೆ ಟೂರ್ನಿಯ ಪದಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರೆ, 22 ವರ್ಷದೊಳಗಿನವರ ತಂಡವು ನಾಲ್ಕನೇ ಸ್ಥಾನದೊಂದಿಗೆ (13 ಪದಕ) ಗಳಿಸಿತು.
ಟೂರ್ನಿಯ ಅಂತಿಮ ದಿನವಾದ ಸೋಮವಾರ, ರಿತಿಕಾ 22 ವರ್ಷದೊಳಗಿನ ಮಹಿಳೆಯರ ವಿಭಾಗದ 80+ ಕೆ.ಜಿ. ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಬೀಗಿದರು. ಫೈನಲ್ ಪಂದ್ಯದಲ್ಲಿ ಅವರು ಏಕಾಗ್ರತೆ ಪ್ರದರ್ಶಿಸಿ ತಮಗಿಂತಲೂ ಬಲಿಷ್ಠರಾದ ಆ್ಯಸಲ್ ಟಾಕ್ಟಸಿನ್ ಎದುರು 4:1ರಿಂದ ಗೆಲುವು ಸಾಧಿಸಿದರು. ಎಚ್ಚರಿಕೆ ಹಾಗೂ ಆಕ್ರಮಣಮಿಶ್ರಿತ ಆಟವಾಡಿದ ರಿತಿಕಾ, ಕಜಕಸ್ತಾನದ ಬಾಕ್ಸರ್‌ಗೆ ಸೋಲಿನ ಪಂಚ್ ನೀಡಿದರು.
ಇದಕ್ಕೂ ಮೊದಲು ನಡೆದ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಯಾತ್ರಿ ಪಟೇಲ್ ಅವರು ಉಜ್ಬೇಕಿಸ್ತಾನದ ಖುಮೊರಾಬೊನು ಮಮಜೋನಾವಾ ಎದುರು ಪರಾಭವಗೊಂಡರು. ಪ್ರಿಯಾ ಅವರು 60 ಕೆ.ಜಿ. ವಿಭಾಗದಲ್ಲಿ ಚೀನಾದ ಯು ಟಿಯಾನ್ ವಿರುದ್ಧ ಹೋರಾಡಿ ಸೋತು, ಬೆಳ್ಳಿ ಪದಕ ಪಡೆದರು.
ನೀರಜ್ ಅವರು ಪುರುಷರ 75 ಕೆ.ಜಿ. ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಉಜ್ಬೇಕಿಸ್ತಾನದ ಶವ್‌ಕಾಜೊನ್ ಬೊಲ್ಟೇವ್ ಅವರಿಗೆ ಮಣಿದರೆ, ಇಶಾನ್ ಕಟಾರಿಯಾ ಅವರು 90+ ಕೆ.ಜಿ. ವಿಭಾಗದಲ್ಲಿ ಖಲೀಂಜಾನ್ ಮಮಸೊಲೀವ್ (ಉಜ್ಬೇಕಿಸ್ತಾನ) ವಿರುದ್ಧ ಸೋಲು ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.