ADVERTISEMENT

ಏಷ್ಯನ್‌ ಕ್ರೀಡಾಕೂಟ2018: ಭಾರತಕ್ಕೆ ಎರಡು ಚಿನ್ನ, ಎರಡು ಕಂಚು ತಂದ ಶುಭ ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 6:54 IST
Last Updated 24 ಆಗಸ್ಟ್ 2018, 6:54 IST
ಪುರುಷರ ಟೆನಿಸ್‌ನ ಡಬಲ್ಸ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ರೋಹನ್ ಬೋಪಣ್ಣ ಮತ್ತು ದಿವೀಜ್ ಶರಣ್ ಸಂಭ್ರಮಿಸಿದರು. –ರಾಯಿಟರ್ಸ್‌ ಚಿತ್ರ
ಪುರುಷರ ಟೆನಿಸ್‌ನ ಡಬಲ್ಸ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ರೋಹನ್ ಬೋಪಣ್ಣ ಮತ್ತು ದಿವೀಜ್ ಶರಣ್ ಸಂಭ್ರಮಿಸಿದರು. –ರಾಯಿಟರ್ಸ್‌ ಚಿತ್ರ   

ಜಕಾರ್ತ: ಏಷ್ಯಾ ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ಬೆಳಿಗ್ಗೆಯೇ ಭಾರತದ ಪಾಳಯದಲ್ಲಿ ಚಿನ್ನದ ಸಂಭ್ರಮ ಗರಿಗೆದರಿತು.

ಪುರುಷರ ರೋಯಿಂಗ್‌ನ ಕ್ವಾಡ್ರಾಪಲ್ ಸ್ಕಲ್‌ನಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದಿತು. ಸವರನ್ ಸಿಂಗ್, ದತ್ತು ಭೋಕನಾಳ್, ಸುಖಮೀತ್ ಸಿಂಗ್ ಮತ್ತು ಓಂ ಪ್ರಕಾಶ್ ಅವರ ತಂಡವು ಈ ಸಾಧನೆ ಮಾಡಿತು.

6 ನಿಮಿಷ, 17.13 ಸೆಕೆಂಡುಗಳಲ್ಲಿ ತಂಡವು ಗುರಿ ಮುಟ್ಟಿತು. ಇಂಡೊನೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡವು.

ಪುರುಷರ ಲೈಟ್‌ವ್ಹೇಟ್ ಡಬಲ್ಸ್‌ ಸ್ಕಲ್ಸ್‌ನಲ್ಲಿ ಭಗವಾನ್ ಸಿಂಗ್ ಮತ್ತು ರೋಹಿತ್ ಕುಮಾರ್ ಅವರು ಕಂಚಿನ ಪದಕ ಗೆದ್ದರು. ಪದಕ ವಿಜೇತರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ರಾಜ್ಯವರ್ಧನಸಿಂಗ್ ರಾಠೋಡ್ ಅವರು ಅಭಿನಂದಿಸಿದ್ದಾರೆ.

ಮೋಡಿ ಮಾಡಿದ ರೋಹನ್ ಜೋಡಿ: ಪುರುಷರ ಟೆನಿಸ್‌ನ ಡಬಲ್ಸ್‌ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವೀಜ್ ಶರಣ್ ಜೋಡಿಯು 6–3, 6-4ಯಿಂದ ಅಲೆಕ್ಸಾಂಡ್ರಾ ಬುಬಿಕ್ ಮತ್ತು ಯವೆಸೆವ ಜೋಡಿಯ ವಿರುದ್ಧ ಜಯ ಸಾಧಿಸಿತು.

ADVERTISEMENT

ಭಾರತಕ್ಕೆ ಜಯ; ಪಾಕ್‌ಗೆ ಸೋಲು: ಪುರುಷರ ಹ್ಯಾಂಡ್‌ಬಾಲ್‌ನ ಮುಖ್ಯ ಸುತ್ತಿನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿದೆ.

ರೋಚಕ ಪಂದ್ಯದಲ್ಲಿ ಭಾರತವು 28–27 ಅಂಕಗಳಿಂದ ಪಾಕಿಸ್ತಾನದ ಸವಾಲನ್ನು ಮೀರಿ ನಿಂತಿತು.

ಆರ್ಚರಿಯಲ್ಲಿ ಜಯ: ಭಾರತ ಆರ್ಚರಿ ತಂಡವು ಮಿಶ್ರ ತಂಡ ವಿಭಾಗದಲ್ಲಿ ಜಯ ಗಳಿಸಿದೆ. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಭಾರತ ತಂಡವು 155–147 ರಿಂದ ಇರಾಕ್‌ ವಿರುದ್ಧ ಜಯಿಸಿತು.

ಮಹಿಳೆಯರ ಶೂಟಿಂಗ್‌ನ 10 ಮೀಟರ್ಸ್‌ ರೈಫಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಮತ್ತು ಹೀನಾ ಸಿಧು ಅವರು ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.