ADVERTISEMENT

ಏಷ್ಯಾಡ್‌: ಕಠಿಣ ಮಾನದಂಡ ನಿಗದಿಗೊಳಿಸಿದ ಕ್ರೀಡಾ ಸಚಿವಾಲಯ

ಹೆಚ್ಚುವರಿ ನೆರವು ಸಿಬ್ಬಂದಿಗೆ ನಿರ್ಬಂಧ

ಪಿಟಿಐ
Published 24 ಸೆಪ್ಟೆಂಬರ್ 2025, 13:30 IST
Last Updated 24 ಸೆಪ್ಟೆಂಬರ್ 2025, 13:30 IST
   

ನವದೆಹಲಿ: ಪದಕಗಳನ್ನು ಗೆಲ್ಲುವ ಖಚಿತ ಅವಕಾಶ ಇರುವವರನ್ನು ಮಾತ್ರ ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಆಯ್ಕೆ ಮಾನದಂಡಗಳಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. 2026ರ ಏಷ್ಯನ್ ಗೇಮ್ಸ್‌ಗೆ ಕ್ರೀಡಾ ಸಚಿವಾಲಯ ಕಠಿಣ ಆಯ್ಕೆ ಮಾನದಂಡಗಳನ್ನು ನಿಗದಿ ಮಾಡಿದೆ.

ಇದರಲ್ಲಿ ಕಾಂಟಿನೆಂಟಲ್ (ಖಂಡ ಮಟ್ಟದ) ರ್‍ಯಾಂಕಿಂಗ್‌ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸರ್ಕಾರಕ್ಕೆ ವೆಚ್ಚವಾಗದಿದ್ದರೂ ಹೆಚ್ಚುವರಿ ತರಬೇತುದಾರರನ್ನು ಮತ್ತು ನೆರವು ಸಿಬ್ಬಂದಿಯನ್ನು ಕರೆದೊಯ್ಯುವುದನ್ನು ನಿರ್ಬಂಧಿಸಲಾಗಿದೆ.

ಐದು ಪುಟಗಳ ಈ ಕಡತವನ್ನು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬುಧವಾರ ಅಪ್‌ಲೋಡ್‌ ಮಾಡಲಾಗಿದೆ.  ವೈಯಕ್ತಿಕ ವಿಭಾಗದಲ್ಲಿ ಅಗ್ರ ಆರು ರ‍್ಯಾಂಕ್‌ ಒಳಗೆ ಇರುವವರು ಮತ್ತು ತಂಡ ಕ್ರೀಡೆಗಳಲ್ಲಿ ಮೊದಲ ಎಂಟು ಕ್ರಮಾಂಕಗಳ ಒಳಗೆ ಇದ್ದರಷ್ಟೇ, ರಾಷ್ಟ್ರೀಯ ಫೆಡರೇಷನ್‌ಗಳು ನಾಮನಿರ್ದೇಶನ ಮಾಡಬಹುದಾಗಿದೆ.

ADVERTISEMENT

ಏಷ್ಯನ್‌ ಕ್ರೀಡೆಗಳು ಮುಂದಿನ ವರ್ಷದ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ವರೆಗೆ ಜಪಾನ್‌ನ ನಗೋಯಾದಲ್ಲಿ ನಡೆಯಲಿವೆ.

‘ಏಷ್ಯನ್‌, ಕಾಮನ್‌ವೆಲ್ತ್ ಹೀಗೆ ಬಹು ತಂಡಗಳ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಖಚಿತ ಅವಕಾಶ ಇರುವವರನ್ನು ಮಾತ್ರ ಆಯ್ಕೆಗೆ ಪರಿಗಣಿಸಬೇಕು ಎಂಬುದು ಇದರ ಉದ್ದೇಶ’ ಎಂದು ತಿಳಿಸಲಾಗಿದೆ. ಈ ಹಿಂದಿನ ಆಯ್ಕೆ ಮಾನದಂಡವು ಸ್ಪಷ್ಟತೆ ಹೊಂದಿಲ್ಲ ಎಂದು ಟೀಕೆಗೆ ಒಳಗಾಗಿತ್ತು.

‘ಕೆಲವು ಕ್ರೀಡಾಪಟುಗಳು, ತಂಡಗಳು ಪಾಲ್ಗೊಳ್ಳುವುದಷ್ಟಕ್ಕೇ ಗಮನಹರಿಸುತ್ತಿವೆ ಎಂಬುದು ಸಚಿವಾಲಯ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಇನ್ನು ಮುಂದೆ ಇಂಥವರಿಗೆ/ ತಂಡಗಳಿಗೆ  ಅಂಗೀಕಾರ ನೀಡುವುದಿಲ್ಲ’ ಎಂದು ಹೇಳಲಾಗಿದೆ.

‘ಮಾನದಂಡಗಳ ಪ್ರಕಾರ ಆಯ್ಕೆಯಾದ ಕ್ರೀಡಾಪಟುಗಳು, ಸಚಿವಾಲಯ ಅಯ್ಕೆ ಮಾಡಿರುವ ಕೋಚ್‌ಗಳು ಮತ್ತು ನೆರವು ಸಿಬ್ಬಂದಿ ಮಾತ್ರ ರಾಷ್ಟ್ರೀಯ ತಂಡದ (ಕಂಟಿನ್ಜೆಂಟ್‌) ಭಾಗವಾಗಿರಲಿದ್ದು, ಸರ್ಕಾರ ಇವರ ವೆಚ್ಚವನ್ನಷ್ಟೇ ಭರಿಸಲಿದೆ. ಇವರನ್ನು ಬಿಟ್ಟು ಯಾವುದೇ ಹೆಚ್ಚುವರಿ ಕೋಚ್‌, ಕ್ರೀಡಾಪಟುಗಳು ಅಥವಾ ನೆರವು ಸಿಬ್ಬಂದಿಗೆ ತಂಡದಲ್ಲಿ ಅವಕಾಶ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ. ಈ ವೈಯಕ್ತಿಕ ವೆಚ್ಚದಲ್ಲಿ ಕೋಚ್‌ಗಳನ್ನು ಕರೆದೊಯ್ಯಲು ಅವಕಾಶ ನೀಡಬೇಕೆಂದು ಪಟ್ಟುಹಿಡಿಯುತ್ತಿದ್ದು, ಇದು ವಿವಾದಗಳಿಗೆ ಕಾರಣವಾಗಿತ್ತು.

ಈ ಆಯ್ಕೆ ಮಾನದಮಡವು, ಕಾಮನ್ವೆಲ್ತ್ ಕ್ರೀಡೆಗಳು (2026ರ ಜುಲೈ– ಆಗಸ್ಟ್‌), ಪ್ಯಾರಾ ಏಷ್ಯನ್ ಗೇಮ್ಸ್‌, ಏಷ್ಯನ್ ಒಳಾಂಗಣ ಕ್ರೀಡೆಗಳು, ಏಷ್ಯನ್ ಬೀಚ್‌ ಗೇಮ್ಸ್‌, ಯೂತ್‌ ಒಲಿಂಪಿಕ್ಸ್‌, ಏಷ್ಯನ್ ಯೂತ್ ಗೇಮ್ಸ್‌ಗಳಿಗೆ ಅನ್ವಯವಾಗಲಿದೆ. ಈ ಹಿಂದಿನ 12 ತಿಂಗಳು ಕ್ರೀಡಾಪಟುಗಳು/ ತಂಡಗಳು ನೀಡಿದ ನಿರ್ವಹಣೆ ಗಣನೆಗೆ ಬರಲಿದೆ.

ಈ ಕಠಿಣ ನಿಯಮಾವಳಿ ಭಾರತ ಫುಟ್‌ಬಾಲ್ ತಂಡದ ಪಾಲ್ಗೊಳ್ಳುವಿಕೆಗೆ ಸಮಸ್ಯೆ ತರಲಿದೆ. ಭಾರತ ತಂಡವು ಫಿಫಾ ರ್‍ಯಾಂಕಿಂಗ್‌ನಲ್ಲಿಈಗ  ಏಷ್ಯಾ ಮಟ್ಟದಲ್ಲಿ 24ನೇ ಸ್ಥಾನದಲ್ಲಿದೆ.

‌ಭಾರತ, 2023ರ ಹಾಂಗ್‌ಝೂ ಏಷ್ಯನ್ ಗೇಮ್ಸ್‌ನಲ್ಲಿ 28 ಚಿನ್ನ ಸೇರಿದಂತೆ 106 ಪದಕಗಳನ್ನು ಗೆದ್ದು ಇದುವರೆಗಿನ ಅತ್ಯುತ್ತಮ ಸಾಧನೆ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.