ADVERTISEMENT

ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ: ನಾಲ್ಕನೇ ಸ್ಥಾನದಲ್ಲಿ ಭಾರತ

ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ: ಕಜಕಸ್ತಾನ ವಿರುದ್ಧ ಡ್ರಾ

ಪಿಟಿಐ
Published 16 ಅಕ್ಟೋಬರ್ 2020, 13:39 IST
Last Updated 16 ಅಕ್ಟೋಬರ್ 2020, 13:39 IST
ನಿಹಾಲ್‌ ಸರಿನ್‌
ನಿಹಾಲ್‌ ಸರಿನ್‌   

ಚೆನ್ನೈ: ಏಷ್ಯನ್‌ ನೇಷನ್ಸ್ ಕಪ್‌ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಟುಗಳು ಶುಕ್ರವಾರ ಉತ್ತಮ ಸಾಮರ್ಥ್ಯ ತೋರಿದರು. ಒಂದು ಗೆಲುವು ಹಾಗೂ ಎರಡು ಸುತ್ತುಗಳಲ್ಲಿ ಡ್ರಾ ಸಾಧಿಸಿದ ತಂಡ, ಆರು ಸುತ್ತುಗಳ ಅಂತ್ಯಕ್ಕೆ ನಾಲ್ಕನೇ ಸ್ಥಾನದಲ್ಲಿತ್ತು.

ಅಗ್ರ ಶ್ರೇಯಾಂಕ ಪಡೆದಿರುವ ಭಾರತ ತಂಡದ ಆಟಗಾರರು ಮೂರು ಸುತ್ತುಗಳ ಬಳಿಕ ಆರನೇ ಸ್ಥಾನದಲ್ಲಿದ್ದರು. ಆರನೇ ಸುತ್ತಿನಲ್ಲಿ ಪ್ರಬಲ ತಂಡವಾದ ಕಜಕಸ್ತಾನದೊಂದಿಗೆ ಭಾರತ 2–2ರ ಡ್ರಾ ಸಾಧಿಸಿತು. ಇದಕ್ಕೂ ಮೊದಲು 3.5–0.5 ಪಾಯಿಂಟ್ಸ್‌ನಿಂದ ಜೋರ್ಡಾನ್‌ ತಂಡವನ್ನು ಮಣಿಸಿದ್ದ ತಂಡ, ಇಂಡೊನೇಷ್ಯಾದೊಂದಿಗೆ 2–2ರಿಂದ ಡ್ರಾ ಮಾಡಿಕೊಂಡಿತ್ತು.

ಕಜಕಸ್ತಾನ ಎದುರಿನ ಹಣಾಹಣಿಯಲ್ಲಿ 16 ವರ್ಷದ ನಿಹಾಲ್‌ ಸರಿನ್‌ ಹಾಗೂ ಅನುಭವಿ ಕೃಷ್ಣನ್‌ ಶಶಿಕಿರಣ್‌ ಅವರು ಕ್ರಮವಾಗಿ ರುಸ್ತುಂ ಕುಸ್ನುಟಿದೊವ್‌ ಹಾಗೂ ಡೆನಿಸ್‌ ಮಖ್‌ನೆವ್‌ ಎದುರು ಗೆದ್ದು ಬೀಗಿದರು. ಬಿ. ಅದಿಬನ್‌ ಹಾಗೂ ತಂಡದ ನಾಯಕ ಸೂರ್ಯಶೇಖರ್‌ ಗಂಗೂಲಿ ಅವರು ತಾವಾಡಿದ ಪಂದ್ಯಗಳನ್ನು ಸೋತರು.

ADVERTISEMENT

ಇದುವರೆಗೆ ಟೂರ್ನಿಯಲ್ಲಿ ಶಶಿಕಿರಣ್‌ ತಾನಾಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಗಂಗೂಲಿ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ವಿಜಯ ಸಾಧಿಸಿದ್ದಾರೆ.

ಆರು ಸುತ್ತುಗಳ ಅಂತ್ಯಕ್ಕೆ ಭಾರತ ಒಂಬತ್ತು ಮ್ಯಾಚ್‌ ಪಾಯಿಂಟ್ಸ್‌ (ಜಯ ಗಳಿಸಿದರೆ ಎರಡು ಹಾಗೂ ಡ್ರಾ ಸಾಧಿಸಿದರೆ ಒಂದು ಪಾಯಿಂಟ್‌ ನೀಡಲಾಗುತ್ತದೆ) ಕಲೆಹಾಕಿದೆ. ಟೂರ್ನಿಯಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅಷ್ಟೇ ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಪ್ರಮುಖ ಆಟಗಾರರಾದ ವಿಶ್ವನಾಥನ್‌ ಆನಂದ್‌ ಹಾಗೂ ವಿದಿತ್‌ ಗುಜರಾಥಿ ಅವರು ಭಾರತ ತಂಡದಲ್ಲಿ ಇಲ್ಲ.

11 ಪಾಯಿಂಟ್ಸ್‌ ಹೊಂದಿರುವ ಇರಾನ್‌ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಹಾಗೂ ಕಜಕಸ್ತಾನ ತಲಾ 10 ಪಾಯಿಂಟ್ಸ್‌ನೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.