ADVERTISEMENT

ಏಷ್ಯನ್‌ ಚಾಂಪಿಯನ್‌ಷಿಪ್‌ ಶೂಟಿಂಗ್‌: ಗುರುಪ್ರೀತ್ ಸಿಂಗ್ ಚಿನ್ನ

ಪಿಟಿಐ
Published 28 ಆಗಸ್ಟ್ 2025, 15:45 IST
Last Updated 28 ಆಗಸ್ಟ್ 2025, 15:45 IST
ಗುರುಪ್ರೀತ್ ಸಿಂಗ್
ಗುರುಪ್ರೀತ್ ಸಿಂಗ್   

ಶಿಮ್ಯೆಟ್‌ (ಕಜಾಕಸ್ತಾನ): ಭಾರತದ ಶೂಟರ್‌ಗಳಾದ ಗುರುಪ್ರೀತ್ ಸಿಂಗ್ ಮತ್ತು ಅಮನ್‌ಪ್ರೀತ್ ಸಿಂಗ್ ಅವರು ಗುರುವಾರ ಏಷ್ಯನ್‌ ಚಾಂಪಿಯನ್‌ಷಿಪ್‌ನ ಪುರುಷರ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

ಸೀನಿಯರ್‌, ಜೂನಿಯರ್‌ ಮತ್ತು ಯೂತ್‌ ವಿಭಾಗಗಳಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು 82ಕ್ಕೆ ಏರಿಕೆಯಾಗಿದೆ. ಅದರಲ್ಲಿ 44 ಚಿನ್ನ, 20 ಬೆಳ್ಳಿ ಮತ್ತು 18 ಕಂಚು ಸೇರಿವೆ.

ಗುರುಪ್ರೀತ್‌, ಅಮನ್‌ಪ್ರೀತ್‌ ಅವರು ಹರ್ಷ್‌ ಗುಪ್ತಾ ಅವರ ಜೊತೆಗೂಡಿ ಒಟ್ಟು 1709 ಅಂಕ ಗಳಿಸಿ, ತಂಡ ವಿಭಾಗದಲ್ಲಿ ಚಾಂಪಿಯನ್‌ ಆದರು. ಜೂನಿಯರ್‌ ಬಾಲಕರ ವಿಭಾಗದಲ್ಲಿ 50 ಮೀಟರ್ ರೈಫಲ್ ಪ್ರೋನ್‌ ತಂಡ ಮತ್ತು 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ತಂಡವೂ ಚಿನ್ನ ಗೆದ್ದಿತು.

ADVERTISEMENT

37 ವರ್ಷದ ಗುರುಪ್ರೀತ್ ಅವರಿಗೆ ಇದು ಅಂತತರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಚಿನ್ನದ ಪದಕವಾಗಿದೆ. 12 ವರ್ಷಗಳ ಹಿಂದೆ ಟೆಹ್ರಾನ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಇದೇ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಗುರುಪ್ರೀತ್‌ ಮತ್ತು ಅಮನ್‌ಪ್ರೀತ್‌ ಅವರು ತಲಾ 572 ಅಂಕ ಸಂಪಾದಿಸಿದರು. ಇನ್ನರ್‌ ಸರ್ಕಲ್‌ ಶಾಟ್‌ಗಳ ಆಧಾರದಲ್ಲಿ ಗುರುಪ್ರೀತ್‌ ಚಿನ್ನ ತಮ್ಮದಾಗಿಸಿಕೊಂಡರು. 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಚಿನ್ನ ವಿಜೇತ ಚೀನಾದ ಸು ಲಿಯಾನ್‌ಬೋಫನ್ ಕಂಚಿನ ಪದಕ ಗೆದ್ದರು.

ಜೂನಿಯರ್ ವಿಭಾಗದ 25 ಮೀಟರ್‌ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೂರಜ್ ಶರ್ಮಾ 571 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ತನಿಷ್ಕ್ ನಾಯ್ಡು 568 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಸೂರಜ್‌, ತನಿಷ್ಕ್‌ ಮತ್ತು ಮುಖೇಶ್ ನೆಲವಳ್ಳಿ ಅವರನ್ನು ಒಳಗೊಂಡ ತಂಡವು 1703 ಅಂಕಗಳೊಂದಿಗೆ ತಂಡ ವಿಭಾಗದ ಚಿನ್ನ ಗೆದ್ದಿತು. 

ಸೀನಿಯರ್‌ ಮತ್ತು ಜೂನಿಯರ್‌ ವಿಭಾಗಗಳ 50 ಮೀಟರ್ ರೈಫಲ್ ಪ್ರೋನ್‌ನಲ್ಲಿ ಭಾರತಕ್ಕೆ ವೈಯಕ್ತಿಕ ಪದಕ ಸಿಗಲಿಲ್ಲ. ಆದರೆ, ಸಮಿ ಉಲಾಹ್ ಖಾನ್, ಆ್ಯಡ್ರಿಯನ್ ಕರ್ಮಾಕರ್ ಮತ್ತು ಕುಶಾಗ್ರ ಸಿಂಗ್ ರಾಜಾವತ್ ಅವರ ತಂಡವು ಜೂನಿಯರ್‌ ವಿಭಾಗದಲ್ಲಿ 1844.3 ಅಂಕಗಳೊಂದಿಗೆ ಚಾಂಪಿಯನ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.