
ನವದೆಹಲಿ: ಅಮೋಘ ಲಯ ಪ್ರದರ್ಶಿಸಿದ ಭಾರತದ ಒಲಿಂಪಿಯನ್ ಇಶಾ ಸಿಂಗ್ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಬುಧವಾರ ಚಿನ್ನ ಗೆದ್ದರು. ಜೊತೆಗೆ ತಂಡ ವಿಭಾಗದಲ್ಲೂ ಭಾರತ ಚಿನ್ನ ಗೆಲ್ಲಲು ನೆರವಾದರು.
ಈ ಚಾಂಪಿಯನ್‌ಷಿಪ್‌ನ ಮೊದಲ ದಿನ, ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಪುರುಷರ ಟೀಮ್ ವಿಭಾಗದಲ್ಲಿ ಭಾರತ ಬೆಳ್ಳಿ ಜಯಿಸಿತು.
21 ವರ್ಷ ವಯಸ್ಸಿನ ಇಶಾ ಹಿನ್ನಡೆಯಿಂದ ಚೇತರಿಸಿಕೊಂಡು 239.8 ಸ್ಕೋರ್‌ನೊಡನೆ ಚಿನ್ನ ಗೆದ್ದರು. ತೈವಾನ್‌ನ ಚೆಂಗ್ ಯೆನ್–ಚಿಂಗ್ (235.4) ಮತ್ತು ಯು ಐ–ವೆನ್ (217.7) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
19 ವರ್ಷ ವಯಸ್ಸಿನ ಸುರುಚಿ ನಾಲ್ಕನೇ ಸ್ಥಾನ ಪಡೆದರು. ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮನು ಭಾಕರ್ ಅವರು ಎಂಟು ಸ್ಪರ್ಧಿಗಳ ಫೈನಲ್‌ನಲ್ಲಿ ಏಳನೇ ಸ್ಥಾನ ಗಳಿಸಿದರು.
ತಂಡ ವಿಭಾಗದಲ್ಲಿ ಭಾರತ 1,726 ಅಂಕ ಕಲೆಹಾಕಿ ಚಿನ್ನ ಗೆದ್ದಿತು. ಸುರುಚಿ (576), ಮನು (575) ಮತ್ತು ಇಶಾ (575) ಅವರು ಇದಕ್ಕೆ ಕಾರಣರಾದರು. ವಿಯೆಟ್ನಾಂ (1,713) ಮತ್ತು ಚೀನಾ ತೈಪಿ (1,711) ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದವು.
ಸಾಮ್ರಾಟ್‌ಗೆ ಕಂಚು:
ಹೋದ ವರ್ಷ ಕೈರೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದ 21 ವರ್ಷ ವಯಸ್ಸಿನ ಸಾಮ್ರಾಟ್ ರಾಣಾ ಪುರುಷರ ವಿಭಾಗದಲ್ಲಿ 220.3 ಸ್ಕೋರ್‌ನೊಡನೆ ಕಂಚಿನ ಪದಕ ಗೆದ್ದರು. ಉಜ್ಬೇಕಿಸ್ತಾನದ ವ್ಲಾದಿಮಿರ್ ಸ್ವೆಚ್ನಿಕೋವ್ (242) ಚಿನ್ನ ಗೆದ್ದರೆ, ಕಜಾಕಸ್ತಾನದ ವೆಲೆರಿ ರಾಖಿಮ್‌ಝಾನ್ (241) ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.
ಎಂಟು ಮಂದಿಯ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಶ್ರವಣ್ ಕುಮಾರ್ ನಾಲ್ಕನೇ ಸ್ಥಾನ ಪಡೆದರು.
ಭಾರತ ತಂಡವು (ಸಾಮ್ರಾಟ್, ಶ್ರವಣ್, ವರುಣ್ ತೋಮಾರ್) ತಂಡ ವಿಭಾಗದಲ್ಲಿ 1732 ಪಾಯಿಂಟ್‌ಗಳೊಡನೆ ಬೆಳ್ಳಿ ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.