ADVERTISEMENT

ಏಷ್ಯನ್‌ ಶೂಟಿಂಗ್‌: ಮನು ಭಾಕರ್‌ಗೆ ಕಂಚು

ಜೂನಿಯರ್‌ ವಿಭಾಗದಲ್ಲಿ ರಶ್ಮಿಕಾಗೆ ಡಬಲ್‌ ಚಿನ್ನ

ಪಿಟಿಐ
Published 19 ಆಗಸ್ಟ್ 2025, 16:19 IST
Last Updated 19 ಆಗಸ್ಟ್ 2025, 16:19 IST
<div class="paragraphs"><p>ಮನು ಭಾಕರ್‌&nbsp;</p></div>

ಮನು ಭಾಕರ್‌ 

   

ಶೈಮ್ಕೆಂಟ್‌ (ಕಜಕಸ್ತಾನ): ಒಲಿಂಪಿಕ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪನ್‌ನ ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಜೂನಿಯರ್‌ ವಿಭಾಗದಲ್ಲಿ ರಶ್ಮಿಕಾ ಸೆಹಗಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 

ಎಂಟು ಶೂಟರ್‌ಗಳನ್ನು ಒಳಗೊಂಡ ಫೈನಲ್‌ ಸುತ್ತಿನಲ್ಲಿ 23 ವರ್ಷದ ಭಾಕರ್‌ 219.7 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಗಳಿಸಿದರು. ಚೀನಾದ ಕ್ವಿಯಾಂಕೆ ಮಾ (243.2) ಮತ್ತು ಕೊರಿಯಾದ ಜಿಯಿನ್ ಯಂಗ್ (241.6) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

ADVERTISEMENT

ಭಾಕರ್‌ (583) ಅವರು ತಂಡ ವಿಭಾಗದಲ್ಲೂ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಪಲಕ್ ಗುಲಿಯಾ (573) ಮತ್ತು ಸುರುಚಿ ಸಿಂಗ್ (574) ಅವರೊಂದಿಗೆ ಕಂಚಿನ ಪದಕ ಗೆದ್ದರು. ವೈಯಕ್ತಿಕ ಸ್ಪರ್ಧೆಯಲ್ಲಿ ಪಲಕ್ ಮತ್ತು ಸುರುಚಿ ಕ್ರಮವಾಗಿ ಮೂರು ಮತ್ತು ಎರಡು ಅಂಕಗಳ ಅಂತರದಿಂದ ಫೈನಲ್‌ ಪ್ರವೇಶಿಸಲು ವಿಫಲರಾದರು.

ರಶ್ಮಿಕಾಗೆ ಡಬಲ್‌ ಚಿನ್ನ: ಜೂನಿಯರ್‌ ವಿಭಾಗದ 10 ಮೀಟರ್‌ ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ರಶ್ಮಿಕಾ ಡಬಲ್‌ ಚಿನ್ನದ ಸಾಧನೆ ಮೆರೆದರು. 

ವೈಯಕ್ತಿಕ ಸ್ಪರ್ಧೆಯಲ್ಲಿ 241.9 ಅಂಕದೊಂದಿಗೆ ಚಾಂಪಿಯನ್ ಆದರು. ಅವರಿಗೆ ಪ್ರಬಲ ಸ್ಪರ್ಧೆ ನೀಡಿದ ಕೊರಿಯಾದ ಹಾನ್ ಸೆಯುಂಗ್‌ಹ್ಯುನ್‌ (237.6) ಬೆಳ್ಳಿ ಪದಕ ಗೆದ್ದರು. ತಂಡ ವಿಭಾಗದಲ್ಲಿ ರಶ್ಮಿಕಾ (582), ವಂಶಿಕಾ ಚೌಧರಿ (573) ಮತ್ತು ಮೋಹಿನಿ ಸಿಂಗ್ (565) ಅವರು ಚಿನ್ನ ಗೆದ್ದರು.

ಕೂಟದಲ್ಲಿ ಭಾರತದ ಶೂಟರ್‌ಗಳು ಸೀನಿಯರ್‌, ಜೂನಿಯರ್‌ ಮತ್ತು ಯೂತ್‌ ವಿಭಾಗದಲ್ಲಿ ಇದುವರೆಗೆ ಐದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ರಶ್ಮಿಕಾ ಸೆಹಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.