ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿಜಾಬ್ ಧರಿಸಿರುವ ಭಾರತದ ಆಟಗಾರ್ತಿಯರು
ಮಂಗಳೂರು: ಇರಾನ್‌ನ ಟೆಹರಾನ್ ನಗರದಲ್ಲಿ ಶನಿವಾರ ಮುಕ್ತಾಯಗೊಂಡ ಏಷ್ಯನ್ ಮಹಿಳೆಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಹಿಜಾಬ್ ಕಡ್ಡಾಯ ಮಾಡಿದ್ದಕ್ಕೆ ಭಾರತ ತಂಡ ಅಸಮಾಧಾನ ವ್ಯಕ್ತಪಡಿಸಿದೆ. ಪಂದ್ಯಗಳ ನೇರ ಪ್ರಸಾರ ಮಾಡಲು ಅವಕಾಶ ಇಲ್ಲದ್ದಕ್ಕೆ ಆನ್‌ಲೈನ್ ಕ್ರೀಡಾ ಮಾಧ್ಯಮಗಳು ಬೇಸರ ವ್ಯಕ್ತಪಡಿಸಿವೆ.
ಚಾಂಪಿಯನ್‌ಷಿಪ್‌ನ ಆರನೇ ಆವೃತ್ತಿ ಮಾ.6ರಂದು ಆರಂಭಗೊಂಡಿತ್ತು. ನಾಲ್ಕು ಬಾರಿಯ ಚಾಂಪಿಯನ್ ಭಾರತ, ಆತಿಥೇಯ ಇರಾನ್, ಇರಾಕ್, ನೇಪಾಳ, ಥಾಯ್ಲೆಂಡ್, ಬಾಂಗ್ಲಾದೇಶ ಮತ್ತು ಮಲೇಷ್ಯಾ ತಂಡಗಳು ಪಾಲ್ಗೊಂಡಿದ್ದವು.
ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ತಂಡಗಳ ಆಟಗಾರ್ತಿಯರು ಹಿಜಾಬ್ ಧರಿಸಿ ನಿಂತಿರುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದ್ದವು. ಒಳಾಂಗಣದಲ್ಲಿ ನಡೆದ ಪಂದ್ಯಗಳನ್ನು ವೀಕ್ಷಿಸಲು ಪುರುಷರಿಗೆ ಅವಕಾಶ ಇಲ್ಲದೇ ಇರುವುದು ಮತ್ತು ನೇರ ಪ್ರಸಾರಕ್ಕೆ ಅವಕಾಶ ನೀಡದೇ ಇದ್ದದ್ದರ ಬಗ್ಗೆ ಆನ್‌ಲೈನ್ ಮೂಲಕ ಕ್ರೀಡಾ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳಲ್ಲಿ ಬೇಸರದ ಮಾತುಗಳು ಕೇಳಿಬಂದಿದ್ದವು.
ಎರಡು ಬಾರಿ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸುವ ಅವಕಾಶ ಲಭಿಸಿರುವ ಮೊದಲ ನಗರ ಟೆಹರಾನ್. ಇದಕ್ಕಿಂತ ಮೊದಲು ಇತರ ಟೂರ್ನಿಗಳು ಇರಾನ್‌ನಲ್ಲಿ ನಡೆದಿವೆ. ಪ್ರತಿ ಬಾರಿಯೂ ಇಲ್ಲಿ ಹಿಜಾಬ್ ಧರಿಸುವುದು ಕಡ್ಡಾಯ ಎಂದು ಭಾರತ ತಂಡದ ಕೋಚ್ ತೇಜಸ್ವಿನಿ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೇರೆ ಬೇರೆ ಟೂರ್ನಿಗಳಲ್ಲಿ ಎರಡು ಬಾರಿ ಆಟಗಾರ್ತಿಯಾಗಿ ಮತ್ತು ಈಗ ಕೋಚ್ ಆಗಿ ಬಂದಿದ್ದೇನೆ. ಅಂಗಣದಲ್ಲಿ ಪುರುಷರು ಇಲ್ಲದ ಕಾರಣ ಹಿಜಾಬ್ ತೆಗೆದಿರಿಸಬಹುದು. ಆದರೆ ಹೋಟೆಲ್ ಸೇರಿದಂತೆ ಉಳಿದ ಎಲ್ಲ ಕಡೆ ಹಿಜಾಬ್ ಧರಿಸಿಯೇ ಇರಬೇಕು. ಭಾರತ ತಂಡ ಒಟ್ಟು 12 ಮಂದಿಯನ್ನು ಹೊಂದಿದ್ದು ಇವರ ಪೈಕಿ ಏಳು ಮಂದಿ ಹೊಸಬರು. ಅವರಿಗೆ ಇದು ಹೊಸ ಅನುಭವ. ಇಲ್ಲಿನ ಧಾರ್ಮಿಕ ಆಚರಣೆಗಳನ್ನು ಎಲ್ಲ ದೇಶದವರಿಗೂ ಕಡ್ಡಾಯಗೊಳಿಸುವುದು ಬೇಸರ ಉಂಟುಮಾಡಿದೆ’ ಎಂದು ತೇಜಸ್ವಿನಿಬಾಯಿ ಹೇಳಿದರು.
ಹೊರಗೆ ಹೋಗಲು ನಿರ್ಬಂಧ
ಚಾಂಪಿಯನ್‌ಷಿಪ್ ನಡೆಯುವ ಸ್ಥಳದಲ್ಲಿ ಅನೇಕ ನಿರ್ಬಂಧಗಳು ಇವೆ. ಹೋಟೆಲ್ ಕೊಠಡಿ ಬಿಟ್ಟು ಹೊರಗೆ ಹೋಗುವಂತಿಲ್ಲ. ಆಹಾರದಲ್ಲೂ ಆಯ್ಕೆ ಇಲ್ಲ. ಅಕ್ಕಿ ಪದಾರ್ಥಗಳಷ್ಟೇ ಸಿಗುತ್ತವೆ. ಆದ್ದರಿಂದ ರೋಟಿ ಮತ್ತಿತರ ಆಹಾರ ತಿಂದು ರೂಢಿ ಇರುವವರಿಗೆ ತೊಂದರೆ ಆಗುತ್ತದೆ. ಇಂಥ ಕಡೆಯಲ್ಲಿ ಮತ್ತೆ ಮತ್ತೆ ಟೂರ್ನಿಗಳನ್ನು ಯಾಕೆ ಆಯೋಜಿಸುತ್ತಾರೆ ಎಂದೇ ಗೊತ್ತಾಗುತ್ತಿಲ್ಲ’ ಎಂದು ತೇಜಸ್ವಿನಿ ಬಾಯಿ ಹೇಳಿದರು.
‘ವಿಮಾನದಿಂದ ಇಳಿಯುವಾಗಲೇ ಹಿಜಾಬ್ ಕಡ್ಡಾಯ ಮಾಡುತ್ತಾರೆ. ಹೋಟೆಲ್‌ನಲ್ಲಿ ಊಟದ ಹಾಲ್‌ಗೆ ಹೋಗುವಾಗ ಹಿಜಾಬ್ ಕಾಣಿಸದೇ ಇದ್ದರೆ ಒತ್ತಾಯಪೂರ್ವಕವಾಗಿ ಹಾಕಿಸುತ್ತಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.