
ರಿಫಾ (ಬಹರೇನ್): ಭಾರತದ ಅಥ್ಲೀಟ್‌ಗಳಾದ ಎಡ್ವಿನಾ ಜೇಸನ್ ಮತ್ತು ಓಶಿನ್ ಅವರು ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ 400 ಮೀಟರ್ ಓಟ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಶುಕ್ರವಾರ ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಎರಡು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚು ಸೇರಿವೆ. ಪದಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
ಎಡ್ವಿನಾ ಅವರು ಫೈನಲ್‌ನಲ್ಲಿ 55.43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಯುಎಇಯ ಆಯಿಷಾ ತಾರಿಕ್ (54.26ಸೆ) ಚಿನ್ನ ಗೆದ್ದರೆ, ತೈವಾನ್‌ನ ವು ಚಿಯಾ-ಯಿಂಗ್ (56.60ಸೆ) ಕಂಚಿನ ಪದಕ ಗೆದ್ದರು.
ಡಿಸ್ಕಸ್ ಥ್ರೋನಲ್ಲಿ ಓಶಿನ್ 43.38 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು. ಚೀನಾದ ಕ್ಸಿನ್ಯಿ ವಾಂಗ್ (55.38 ಮೀ) ಚಿನ್ನ ಗೆದ್ದರು. ತೈವಾನ್‌ನ ಶಿಹ್ ಯುಹ್-ಜೆನ್ (43 ಮೀ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪಲಾಶ್ ಮಂಡಲ್ ಅವರು ಬಾಲಕರ 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು. ಮಂಡಲ್ ಈ ದೂರವನ್ನು 24ನಿ.48.92 ಸೆ. ಗಳಲ್ಲಿ ಕ್ರಮಿಸಿದರು. ಚೀನಾದ ಹಾವೊಝ್ ಝಾಂಗ್ (21ನಿ.43.82 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಯುಜೀ ಲು (22ನಿ.28.64 ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪುರುಷರ ಹೈಜಂಪ್‌ನಲ್ಲಿ ಜುಬಿನ್ ಗೊಹೈನ್ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 2.03 ಮೀ ಎತ್ತರ ಜಿಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.