ADVERTISEMENT

ಮಹಿಳಾ ದಿನ: 250 ಜಿಲ್ಲೆಗಳಲ್ಲಿ ‘ಅಸ್ಮಿತಾ ಅಥ್ಲೆಟಿಕ್ಸ್‌’

ಎರಡು ಲಕ್ಷಕ್ಕೂ ಅಧಿಕ ಬಾಲಕಿಯರು ಭಾಗಿ ನಿರೀಕ್ಷೆ

ಪಿಟಿಐ
Published 3 ಮಾರ್ಚ್ 2026, 0:51 IST
Last Updated 3 ಮಾರ್ಚ್ 2026, 0:51 IST
ರಕ್ಷಾ ಖಡ್ಸೆ
ರಕ್ಷಾ ಖಡ್ಸೆ   

ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಇದೇ 8 ಮತ್ತು 9ರಂದು ದೇಶದಾದ್ಯಂತ 250 ಜಿಲ್ಲೆಗಳಲ್ಲಿ ‘ಅಸ್ಮಿತಾ ಅಥ್ಲೆಟಿಕ್ಸ್‌’ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎರಡು ಲಕ್ಷಕ್ಕೂ ಅಧಿಕ ಬಾಲಕಿಯರು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಸೋಮವಾರ ತಿಳಿಸಿದರು.

ಅಹಮದಾಬಾದ್‌ನಲ್ಲಿ ನಡೆಯಲಿರುವ 2030ರ ಕಾಮನ್‌ವೆಲ್ತ್ ಗೇಮ್ಸ್‌ ಮತ್ತು 2036ರ ಒಲಿಂಪಿಕ್ಸ್‌ ಅತಿಥ್ಯ ಗಮನದಲ್ಲಿಟ್ಟುಕೊಂಡು ಕ್ರೀಡಾ ಸಚಿವಾಲಯವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರೊಂದಿಗೆ ದೇಶದಾದ್ಯಂತ ಮಹಿಳಾ ತಾಂತ್ರಿಕ ಅಧಿಕಾರಿಗಳ ತಂಡವನ್ನು ರಚಿಸುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ‘ಅಸ್ಮಿತಾ’ ಯೋಜನೆಯು ಮಹಿಳೆಯರನ್ನು ಕ್ರೀಡೆಗಳಲ್ಲಿ ಉತ್ತೇಜಿಸುವ ಗುರಿ ಹೊಂದಿದೆ. ಇದು ಖೇಲೊ ಇಂಡಿಯಾ ಯೋಜನೆಯ ಭಾಗವಾಗಿದ್ದು, 2021ರಲ್ಲಿ ಆರಂಭಿಸಲಾಗಿದೆ.

ADVERTISEMENT

ದೇಶದಾದ್ಯಂತ 250 ತಾಣಗಳಲ್ಲಿ 100 ಮೀಟರ್‌, 200 ಮೀ ಮತ್ತು 400 ಮೀ ಓಟದ ಸ್ಪರ್ಧೆಗಳು ನಡೆಯುತ್ತಿದೆ. 13 ವರ್ಷದೊಳಗಿನವರು, 13ರಿಂದ 18 ವರ್ಷ ವಯೋಮಾನ ಮತ್ತು 18 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ತಾಣದ ನಿರ್ವಹಣೆಗಾಗಿ ಐದು ತಾಂತ್ರಿಕ ಅಧಿಕಾರಿಗಳು, 10 ಸ್ವಯಂಸೇವಕರು, ಒಬ್ಬ ಸ್ಪರ್ಧಾ ವ್ಯವಸ್ಥಾಪಕರು, ಹಿಂದಿನ ಚಾಂಪಿಯನ್ ಅಥ್ಲೀಟ್ (ಪಿಸಿಎ) ಮತ್ತು ಜಿಲ್ಲಾ ಯುವಜನ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ.

‘2030ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು 2036ರ ಒಲಿಂಪಿಕ್ಸ್‌ಗೆ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನ ಇದಾಗಿದೆ. ಒಲಿಂಪಿಕ್ಸ್‌ ಆಯೋಜಿಸಲು ಮೂಲಸೌಕರ್ಯಕ್ಕಿಂತ ಇತರ ಸಂಪನ್ಮೂಲಗಳ ಅಗತ್ಯವೂ ಇದೆ. ಅದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲಗಳು, ಪ್ರಮಾಣೀಕೃತ ತಾಂತ್ರಿಕ ಅಧಿಕಾರಿಗಳು ಬೇಕು. ಈ ಅಂತರರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮವು ಅದರ ಸಿದ್ಧತೆಯ ಭಾಗವಾಗಿದೆ’ ಎಂದು ರಕ್ಷಾ ಖಡ್ಸೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.