ADVERTISEMENT

ಗೌಳಿ ಸಮುದಾಯದಲ್ಲಿ ಕ್ರೀಡಾಜ್ಯೋತಿ ಹಚ್ಚಿದ ನಯನಾ ಕೋಕರೆ

ಶಾಲೆಯ ಓದು ಮತ್ತು ಕ್ರೀಡಾ ಸಾಧನೆಗಳಿಂದ ದೂರವೇ ಇದ್ದ ದನಗರಗೌಳಿ ಸಮುದಾಯವೊಂದರ ಪೋರಿ ನಯನಾ 20ವರ್ಷದೊಳಗಿನವರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆ

ಗಿರೀಶದೊಡ್ಡಮನಿ
Published 4 ಆಗಸ್ಟ್ 2023, 22:45 IST
Last Updated 4 ಆಗಸ್ಟ್ 2023, 22:45 IST
 ನಯನಾ
ನಯನಾ    

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮ ಚಳಗೇರಿಯ ರೈತಾಪಿ ಜನರು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟು ಕೂತಿದ್ದರು. ಅದೇ ಹೊತ್ತಿಗೆ ಈ ಊರಿನ ಮಗಳು ನಯನಾ ಕೋಕರೆ ದಕ್ಷಿಣ ಕೊರಿಯಾದಲ್ಲಿ ಮಾಡಿದ ಸಾಧನೆಯೊಂದು ಅವರೆಲ್ಲರ ಕಂಗಳಲ್ಲಿ ಆನಂದಭಾಷ್ಪ ಜಿನುಗಲು ಕಾರಣವಾಯಿತು. 

ಶಾಲೆಯ ಓದು ಮತ್ತು ಕ್ರೀಡಾ ಸಾಧನೆಗಳಿಂದ ದೂರವೇ ಇದ್ದ  ದನಗರಗೌಳಿ ಸಮುದಾಯವೊಂದರ ಪೋರಿ ನಯನಾ 20ವರ್ಷದೊಳಗಿನವರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ  4X100 ಮೀ ರಿಲೆಯಲ್ಲಿ ಕಂಚಿನ ಪದಕ ಜಯಿಸಿದ್ದು ಸಣ್ಣ ಸಾಧನೆಯೇನಲ್ಲ. ಇದರಿಂದಾಗಿ ಈ ಹಿಂದುಳಿದ ಸಮುದಾಯದಲ್ಲಿ ಕ್ರೀಡಾಕ್ರಾಂತಿ ಸದ್ದಿಲ್ಲದೇ ಆರಂಭವಾಗಿದೆ.

ಹಲವಾರು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ನೆಲೆಸಿರುವ ಸಮುದಾಯ ಇದಾಗಿದೆ. ಕೃಷಿ ಕೂಲಿಯೇ ಜೀವನಾಧಾರ. ಬಡತನದಿಂದಾಗಿ ವಿದ್ಯಾಭ್ಯಾಸ ಮತ್ತು ಆಧುನಿಕ ಪ್ರಪಂಚದ ಸೌಲಭ್ಯಗಳಿಂದಲೂ ವಂಚಿತರಾದವರು. ಈ ಊರಿನ ಗಂಗಾರಾಮ್ ಕೋಕರೆ ಅವರಿಗೆ ಮೂವರು ಹೆಣ್ಣು ಮತ್ತು ಇಬ್ಬರು ಗಂಡುಮಕ್ಕಳು.  ಅದರಲ್ಲಿ ನಯನಾ ಕೊನೆಯವರು.  ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸುವಷ್ಟು ಗಂಗಾರಾಮ್ ಅವರ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ನಯನಾ ಅವರ ಅಣ್ಣ ಎಂಟನೇ ತರಗತಿಯವರೆಗೆ ಓದಿ ಶಾಲೆ ಬಿಟ್ಟರು. ನಂತರ ಕೆಲಸ ಮಾಡಲು ಆರಂಭಿಸಿದ್ದರು.

ADVERTISEMENT

ಆದರೆ ನಯನಾ ಮಾತ್ರ ಶಾಲೆ ದಿನಗಳಿಂದಲೇ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ತೋರಿದರು. 100 ಮೀಟರ್ ಮತ್ತು 200 ಮೀಟರ್ ಓಟಗಳಲ್ಲಿ ಎಲ್ಲರನ್ನೂ ಹಿಂದಿಕ್ಕುವಷ್ಟು ಸಾಮರ್ಥ್ಯ ಅವರಿಗೆ ಇತ್ತು.

ಮುಂಡಗೋಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಜಸ್ ಆಫ್ ಸ್ಪೋರ್ಟ್ಸ್‌ ಫೌಂಡೇಷನ್ ನಡೆಸಿದ್ದ ಪ್ರತಿಭಾ ಶೋಧದಲ್ಲಿ ನಯನಾ ಪ್ರತಿಭೆಗೆ ಹೊಸ ತಿರುವು ಲಭಿಸಿತು. 2019ರಲ್ಲಿ ಮೊದಲ ಬಾರಿಗೆ ಬ್ರಿಜಸ್ ಎನ್‌ಜಿಒದಲ್ಲಿ ಅಭ್ಯಾಸ ಆರಂಭವಾಯಿತು.   ಅವರದ್ದೇ ವಸತಿ ನಿಲಯದಲ್ಲಿ ಆಶ್ರಯ ಮತ್ತು ವಿದ್ಯಾಭ್ಯಾಸವೂ ಲಭಿಸಿತು. ಆದರೆ 2020ರಲ್ಲಿ ಜಗತ್ತನ್ನೇ ಕಾಡಿದ ಕೋವಿಡ್ ಬಿಕ್ಕಟ್ಟು ನಯನಾ ಅವರ ಕ್ರೀಡಾ ಭವಿಷ್ಯವನ್ನು ಮೊಟಕುಗೊಳಿಸುವ ಆತಂಕ ಇತ್ತು. 

‘ಕೋವಿಡ್ ಸಂದರ್ಭದಲ್ಲಿ ಹೊರಗೆ ಹೋಗುವಂತಿಲ್ಲ. ವಸತಿ ನಿಲಯದಿಂದಲೂ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಯಿತು. ಮನೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದೆವು. ಖಾಸಗಿ ಸಂಸ್ಥೆಗಳೂ ಧನಸಹಾಯ ನಿಲ್ಲಿಸಿದ್ದವು. ದುಡಿಮೆ ಇಲ್ಲದೇ ಜೀವನ ದುಸ್ತರವಾಗಿತ್ತು. ಆ ಸಂದರ್ಭದಲ್ಲಿಯೂ ಸರ್ಕಾರೇತರ ಸಂಸ್ಥೆಯಾದ  ಟ್ರಾನ್ಸ್‌ವರ್ಲ್ಡ್‌ ಸಮೂಹವು ಬ್ರಿಜಸ್ ಫೌಂಡೇಷನ್ ಮೂಲಕ ನೆರವಿಗೆ ಬಂತು. ಆಹಾರ ಸಾಮಗ್ರಿ, ಹಣ ಮತ್ತು ತರಬೇತಿಗೆ ಸಹಾಯ ಮಾಡಿತು’ ಎಂದು ನಯನಾ ನೆನಪಿಸಿಕೊಳ್ಳುತ್ತಾರೆ.

ತಮಿಳುನಾಡಿನಲ್ಲಿ ನಡೆದ 21ನೇ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ ಕೂಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ ನಯನಾ ಅವರಿಗೆ ಅಂತರರಾಷ್ಟೀಯ ಕೂಟದ ಬಾಗಿಲು ತೆರೆಯಿತು.

200 ಮೀಟರ್ಸ್‌ನಲ್ಲಿ 24.28 ಸೆಕೆಂಡುಗಳ ಸಾಧನೆ ಅವರದ್ದಾಗಿದೆ. ಕೊರಿಯಾದಲ್ಲಿ ಕಂಚು ಗೆದ್ದ 4X100 ಮೀ ರಿಲೆ ತಂಡದಲ್ಲಿ ನಯನಾ ಅವರೊಂದಿಗೆ ಅಭಿನಯಾ, ಅಕ್ಷಯಾ ಹಾಗೂ ತಮನ್ನಾ ಇದ್ದರು. ಈ ತಂಡವು 45.36 ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು.

19 ವರ್ಷದ ನಯನಾ ಸದ್ಯ ಧಾರವಾಡದ ಜೆಎಸ್‌ಎಸ್‌ ಮಹಾವಿದ್ಯಾಲಯದಲ್ಲಿ ಬಿ.ಕಾಂ ಓದುತ್ತಿದ್ದಾರೆ. 

‘ನಮ್ಮ ಎನ್‌ಜಿಒದಲ್ಲಿ ಉತ್ತಮ ಕೋಚ್‌ಗಳಿದ್ದಾರೆ. ಮನೋವೈದ್ಯರು, ಫಿಟ್‌ನೆಸ್‌ ಪರಿಣತರು ಇದ್ದಾರೆ. ಕಾಲೇಜಿನಲ್ಲಿಯೂ ಒಳ್ಳೆಯ ಬೆಂಬಲ ಸಿಗುತ್ತಿದೆ. ಇದರಿಂದಾಗಿ ಇನ್ನೂ ಉನ್ನತ ಸಾಧನೆ ಮಾಡುವ ವಿಶ್ವಾಸ ನನಗಿದೆ’ ಎಂದು ನಯನಾ ಹೇಳುತ್ತಾರೆ.

ಅವರ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ವ್ಯಕ್ತಿ ಕೂಡ ನಯನಾ ಅವರಾಗಿದ್ದಾರೆ. ಇದೀಗ ಅವರ ಸಾಧನೆಯಿಂದಾಗಿ ಸಮುದಾಯದ ಹೆಣ್ಣುಮಕ್ಕಳು ಕೂಡ ಕ್ರೀಡೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ.  ಪಾಲಕರೂ ತಮ್ಮ ಪುತ್ರಿಯರನ್ನು ಉನ್ನತ ವಿದ್ಯಾಭ್ಯಾಸ ಮತ್ತು ಕ್ರೀಡೆಗಳಿಗೆ ಕಳಿಸಲು ಮನಸ್ಸು ಮಾಡುತ್ತಿದ್ದಾರೆ. ನಯನಾ ಬಾಲ್ಯದಲ್ಲಿ ರೂಢಿಸಿಕೊಂಡ ಓಟದ ಹವ್ಯಾಸವು ಅವರ ಕುಟುಂಬ ಮತ್ತು ಸಮುದಾಯವನ್ನೇ ಪ್ರಭಾವಿಸುವಂತಾಗಿದೆ.

ಪದಕ ಜಯಿಸಿ ಬಂದ ನಯನಾ ಕೋಕರೆಗೆ ಅಭಿನಂದನೆಯ ಹೂಮಳೆ
ನಯನಾ ಕೋಕರೆ ಅಭ್ಯಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.