
ಬೆಂಗಳೂರು: ಟೂರ್ನಿಯಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಎಟಿಎಸ್ ಅಟ್ಯಾಕರ್ಸ್ ತಂಡವು 2026ರ ಚೊಚ್ಚಲ ಸಿಎಂ ಕಪ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಗೆದ್ದುಕೊಂಡಿತು.
9 ಡ್ರೀಮ್ಸ್ ಸಂಸ್ಥೆ ಆಶ್ರಯದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಂಗಣದಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರೋವಿನ್ ಪ್ಯಾಂಥರ್ಸ್ ತಂಡವನ್ನು ಮಣಿಸಿ ಎಟಿಎಸ್ ಅಟ್ಯಾಕರ್ಸ್ ತಂಡ ಗೆಲುವಿನ ನಗೆ ಬೀರಿತು.
ಲೀಗ್ ಹಂತದಲ್ಲಿದ್ದ ಎಂಟು ತಂಡಗಳ ಪೈಕಿ ಇನ್‌ಸ್ಪೈರ್ ಚಾಲೆಂಜರ್ಸ್, ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಎಟಿಎಸ್ ಅಟ್ಯಾಕರ್ಸ್ ಮತ್ತು ಪ್ರೋವಿನ್ ಪ್ಯಾಂಥರ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು.
ಮೊದಲ ಸೆಮಿಫೈನಲ್‌ನಲ್ಲಿ ಎಟಿಎಸ್ ಅಟ್ಯಾಕರ್ಸ್ ತಂಡವು ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ತಂಡವನ್ನು ಮಣಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಪ್ರೋವಿನ್ ಪ್ಯಾಂಥರ್ಸ್ ತಂಡವು ಇನ್‌ಸ್ಪೈರ್ ಚಾಲೆಂಜರ್ಸ್ ತಂಡವನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದವು.
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕವಳ ಚಿತ್ರದ ನಿರ್ಮಾಪಕ ಬಿ. ಲೋಕೇಶ್, ಸಕ್ರಾ ವರ್ಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯುಚಿ ನಗಾನೋ ಭಾಗವಹಿಸಿದ್ದರು.
ಈ ಟೂರ್ನಿ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವಿಭಿನ್ನ ಮಾದರಿಯದ್ದಾಗಿತ್ತು. ಶನಿವಾರ ಮತ್ತು ಭಾನುವಾರ ನಡೆದ ಟೂರ್ನಿಯಲ್ಲಿ ಜನಪ್ರತಿನಿಧಿಗಳು, ಐಎಎಸ್/ಐಪಿಎಸ್, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಿತ್ರರಂಗ ಹಾಗೂ ಮಾಧ್ಯಮ ಕ್ಷೇತ್ರದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.
ಸಚಿವರಾದ ಡಾ.ಎಂ.ಸಿ. ಸುಧಾಕರ್, ಮಾಜಿ ಎಂಎಲ್‌ಸಿ ನಾರಾಯಣಸ್ವಾಮಿ, ಐಎಎಸ್ ಅಧಿಕಾರಿ ಸೆಲ್ವಕುಮಾರ್, ಐಪಿಎಸ್ ಅಧಿಕಾರಿಗಳಾದ ಮಿಥುನ್, ರಮೇಶ್ ಬಾನೋಥ್, ಕೆಪಿಎಸ್ ಅಧಿಕಾರಿಗಳಾದ ಸತೀಶ್, ಯೋಗೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪರಮೇಶ್ವರ್ ಸೇರಿದಂತೆ ಹಲವರು ಕಣಕ್ಕಿಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.