
ಗೆಲುವಿನ ಸಂಭ್ರಮದಲ್ಲಿ ಕಾರ್ಲೋಸ್ ಅಲ್ಕರಾಜ್
ಎಎಫ್‌ಪಿ ಚಿತ್ರ
ಮೆಲ್ಬರ್ನ್: ಸ್ಪೇನ್ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಭಾನುವಾರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಕ್ವಾರ್ಟರ್ ಫೈನಲ್ ಲಗ್ಗೆ ಹಾಕಿದರು. ಎದುರಾಳಿ ಆಟಗಾರ ಗಾಯಾಳಾದ ಕಾರಣ ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರೂ ಪ್ರಯಾಸವಿಲ್ಲದೆ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆದರು.
ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ನೇರ ಸೆಟ್‌ಗಳ ಗೆಲುವಿನೊಡನೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಬಾರಿ ಪ್ರಶಸ್ತಿ ಜಯಿಸುವತ್ತ ಹೆಜ್ಜೆಯಿಟ್ಟರು. ಮೂರನೇ ಶ್ರೇಯಾಂಕದ ಕೊಕೊ ಗಾಫ್ ಅವರು ಮೆಲ್ಬರ್ನ್ ಪಾರ್ಕ್‌ನಲ್ಲಿ ಗೆಲುವಿಗೆ ಕೊಂಚ ಬೆವರು ಹರಿಸಿದರು. ಈ ಮಧ್ಯೆ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಮತ್ತು ಮೀರಾ ಆ್ಯಂಡ್ರೀವಾ ಆಘಾತ ಅನುಭವಿಸಿದರು.
ರಾಡ್ ಲೇವರ್ ಅರೇನಾದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಅಲ್ಕರಾಜ್ 7-6 (8/6), 6-4, 7-5ರಿಂದ ಅಮೆರಿಕದ ಟಾಮಿ ಪೌಲ್ ಅವರನ್ನು ಹಿಮ್ಮೆಟ್ಟಿಸಿದರು. ಇಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ 22 ವರ್ಷದ ಅಲ್ಕರಾಜ್ ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ ಅವರನ್ನು ಎದುರಿಸಲಿದ್ದಾರೆ. ಆತಿಥೇಯ ದೇಶದ ಅಲೆಕ್ಸ್ 6–4, 6–1, 6–1ರಿಂದ 10ನೇ ಶ್ರೇಯಾಂಕದ ಅಲೆಕ್ಸಾಂಡರ್ ಬಬ್ಲಿಕ್ (ಕಜಾಕಸ್ತಾನ) ಅವರನ್ನು ಮಣಿಸಿದರು.
ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳ ಪೈಕಿ ಉಳಿದ ಮೂರರಲ್ಲಿ ತಲಾ ಎರಡು ಬಾರಿ ಚಾಂಪಿಯನ್ ಆಗಿರುವ ಅಲ್ಕರಾಜ್ ಅವರಿಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ ಈತನಕ ಎಂಟರ ಘಟ್ಟ ದಾಟಲು ಸಾಧ್ಯವಾಗಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಹೊರಬಿದ್ದಿದ್ದರು. ಈ ಬಾರಿ ಅವರು ಚಾಂಪಿಯನ್ ಆದರೆ ಅತಿ ಕಿರಿಯ ವಯಸ್ಸಿಗೆ ನಾಲ್ಕು ಪ್ರಮುಖ ಪ್ರಶಸ್ತಿ ಗೆದ್ದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗುವರು. ಸದ್ಯ ಈ ದಾಖಲೆ ಅವರದೇ ದೇಶದ ರಫೆಲ್ ನಡಾಲ್ ಹೆಸರಿನಲ್ಲಿದೆ.
ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಗೆಲ್ಲುವ ಛಲದಲ್ಲಿರುವ ಜೊಕೊವಿಚ್ ಅವರು ಸೋಮವಾರ ಅಂತಿಮ 16ರ ಸುತ್ತಿನಲ್ಲಿ ಜೇಕಬ್ ಮೆನ್ಸಿಕ್ ಅವರನ್ನು ಎದುರಿಸಬೇಕಿತ್ತು. ಆದರೆ, ಝೆಕ್ ರಿಪಬ್ಲಿಕ್‌ನ ಆಟಗಾರ ಗಾಯಾಳಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ನಾಲ್ಕನೇ ಶ್ರೇಯಾಂಕದ ಜೊಕೊವಿಚ್ ಅವರು ಮುಂದಿನ ಸುತ್ತಿನಲ್ಲಿ ಒಂಬತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ (ಅಮೆರಿಕ) ಅಥವಾ ಐದನೇ ಶ್ರೇಯಾಂಕದ ಲೊರೆಂಝೊ ಮುಸೆಟ್ಟಿ (ಇಟಲಿ) ಅವರನ್ನು ಎದುರಿಸಲಿದ್ದಾರೆ.
ಹಾಲಿ ರನ್ನರ್ ಅಪ್ ಅಲೆಕ್ಸಾಂಡರ್ ಜ್ವರೇವ್ 6-2, 6-4, 6-4ರಿಂದ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಅವರನ್ನು ಮಣಿಸಿ ಮುನ್ನಡೆದರು. ಕಳೆದ ವರ್ಷದ ಫೈನಲ್‌ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಸೋಲು ಅನುಭವಿಸಿದ್ದ ಮೂರನೇ ಶ್ರೇಯಾಂಕದ ಜ್ವರೇವ್ (ಜರ್ಮನಿ) ಮುಂದಿನ ಸುತ್ತಿನಲ್ಲಿ ಅಮೆರಿಕದ ಲರ್ನರ್ ಟಿಯೆನ್ ವಿರುದ್ಧ ಆಡುವರು. 25ನೇ ಶ್ರೇಯಾಂಕದ ಟಿಯನ್ ಅವರು 6-4, 6-0, 6-3ಯಿಂದ 11ನೇ ಶ್ರೇಯಾಂಕದ ಮೆಡ್ವೆಡೇವ್ ಅವರಿಗೆ ಆಘಾತ ನೀಡಿದರು.
ಸಬಲೆಂಕಾ ಮುನ್ನಡೆ: ಬೆಲಾರೂಸ್‌ನ ಸಬಲೆಂಕಾ 6-1, 7-6 (7/1) ರಿಂದ ಕೆನಡಾದ ವಿಕ್ಟೋರಿಯಾ ಎಂಬೊಕೊ ಅವರನ್ನು ಮಣಿಸಿ ಎಂಟರ ಘಟ್ಟ ಪ್ರವೇಶಿಸಿದರು. 2023 ಮತ್ತು 2024ರ ಚಾಂಪಿಯನ್ ಸಬಲೆಂಕಾ ಅವರಿಗೆ ಮುಂದಿನ ಸುತ್ತಿನಲ್ಲಿ ಅಮೆರಿಕದ ಹದಿಹರೆಯದ ಇವಾ ಜೊವಿಕ್ ಎದುರಾಳಿಯಾಗಿದ್ದಾರೆ. 29ನೇ ಶ್ರೇಯಾಂಕದ ಇವಾ 6-0, 6-1ರಿಂದ ಕಜಾಕಸ್ತಾನದ ಯೂಲಿಯಾ ಪುಟಿನ್ಸೆವಾ ಅವರನ್ನು ಹಿಮ್ಮೆಟ್ಟಿಸಿದರು.
18 ವರ್ಷದ ಇವಾ ಅವರು ವೀನಸ್ ವಿಲಿಯಮ್ಸ್ (1998) ನಂತರ ಆಸ್ಟ್ರೇಲಿಯಾ ಓಪನ್‌ನಲ್ಲಿ ಮಹಿಳಾ ಕ್ವಾರ್ಟರ್ ಫೈನಲ್ ತಲುಪಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಮೆರಿಕದ ತಾರೆ ಗಾಫ್ ಅವರಿಗೆ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ಆಡುವರು. ಗಾಫ್ 6-1, 3-6, 6-3ರ ಮೂರು ಸೆಟ್‌ಗಳ ಹೋರಾಟದಲ್ಲಿ ಕಜಾಕಸ್ತಾನದ ಕರೋಲಿನಾ ಮುಚೋವಾ ವಿರುದ್ಧ ಹೋರಾಡಿ ಗೆದ್ದರೆ, 12ನೇ ಶ್ರೇಯಾಂಕದ ಎಲಿನಾ 6-2, 6-4ರಿಂದ ಎಂಟನೇ ಶ್ರೇಯಾಂಕದ ಮಿರಾ ಆ್ಯಂಡ್ರೀವಾ ಅವರನ್ನು ಮಣಿಸಿದರು.
ಅಮೆರಿಕದ ಆಟಗಾರ್ತಿ ಇವಾ ಜೊವಿಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.