ADVERTISEMENT

ರ‍್ಯಾಂಕಿಂಗ್‌: ಲಕ್ಷ್ಯ ಸೇನ್‌ ರಿಯಾ ಶ್ರೇಷ್ಠ ಸಾಧನೆ

ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌: ಕಿದಂಬಿ ಶ್ರೀಕಾಂತ್‌, ಸಿಂಧು, ಸೈನಾ ಸ್ಥಾನ ಸ್ಥಿರ

ಪಿಟಿಐ
Published 19 ಮಾರ್ಚ್ 2019, 18:32 IST
Last Updated 19 ಮಾರ್ಚ್ 2019, 18:32 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ನವದೆಹಲಿ: ಭಾರತ ಯುವ ಆಟಗಾರರಾದ ಲಕ್ಷ್ಯ ಸೇನ್ ಮತ್ತು ರಿಯಾ ಮುಖರ್ಜಿ ಅವರು ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದು ಅಗ್ರ 100ರಲ್ಲಿ ಸ್ಥಾನ ಗಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್‌ 76ನೇ ಸ್ಥಾನ ಗಳಿಸಿದ್ದು ಮಹಿಳಾ ವಿಭಾಗದಲ್ಲಿ ರಿಯಾ 94ನೇ ಸ್ಥಾನಕ್ಕೇರಿದ್ದಾರೆ.

ಅನುಭವಿ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಅವರು ತಮ್ಮ ಸ್ಥಾನಗಳಲ್ಲೇ ಉಳಿದಿದ್ದಾರೆ. ಕಳೆದ ವಾರ ನಡೆದ ಸ್ವಿಸ್ ಓಪನ್ ಟೂರ್ನಿಯಲ್ಲಿ ಒಲಿಂಪಿಕ್ ಚಾಂಪಿಯನ್‌ ಚೆನ್‌ ಲಾಂಗ್‌ ಎದುರು ಗೆದ್ದಿದ್ದ ಬಿ.ಸಾಯಿ ಪ್ರಣೀತ್ ಮೂರು ಸ್ಥಾನಗಳ ಏರಿಕೆ ಕಂಡಿದ್ದು 19ನೇ ಸ್ಥಾನ ಗಳಿಸಿದ್ದಾರೆ.

ಮಂಗಳವಾರ ಬಿಡುಗಡೆಯಾದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಲಕ್ಷ್ಯ ಸೇನ್‌ 28 ಮತ್ತು ರಿಯಾ 19 ಸ್ಥಾನಗಳ ಏರಿಕೆ ಕಂಡಿದ್ದಾರೆ. ಸಾಯಿ ಪ್ರಣೀತ್‌ 19ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ADVERTISEMENT

ಭಾರತದ ಆಟಗಾರರ ಪೈಕಿ ಕಿದಂಬಿ ಶ್ರೀಕಾಂತ್ ಅಗ್ರ (7) ಸ್ಥಾನದಲ್ಲಿದ್ದು ಸಮೀರ್ ವರ್ಮಾ (14), ಎಚ್‌.ಎಸ್‌.ಪ್ರಣಯ್‌ (24), ಶುಭಂಕರ್ ಡೇ (43), ಪರುಪಳ್ಳಿ ಕಶ್ಯಪ್ (48), ಅಜಯ್ ಜಯರಾಮ್‌ (52) ಸೌರಭ್ ವರ್ಮಾ (53) ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೆಂಟೊ ಮೊಮೊಟೊಗೆ ಅಗ್ರ ಸ್ಥಾನ: ಜಪಾನ್‌ನ ಕೆಂಟೊ ಮೊಮೊಟೊ ಪುರುಷರ ವಿಭಾಗದ ಅಗ್ರ ಸ್ಥಾನದಲ್ಲಿದ್ದು ಚೀನಾದ ಯೂಕಿ ಮತ್ತು ಚೀನಾ ಥೈಪೆಯ ಚೌ ಟಿ ಚೆನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಕ್ರಮವಾಗಿ ಆರು ಹಾಗೂ ಒಂಬತ್ತನೇ ಸ್ಥಾನ ಉಳಿಸಿಕೊಂಡಿದ್ದಾರೆ. ಚೀನಾ ಥೈಪೆಯ ಥಾಯ್‌ ಜು ಯಿಂಗ್‌ ಮೊದಲ ಸ್ಥಾನದಲ್ಲಿದ್ದರೆ ಚೀನಾದ ಚೆನ್‌ ಯೂಫಿ ಮತ್ತು ಜಪಾನ್‌ನ ನೊಜೊಮಿ ಒಕುಹರ ಇತರ ಸ್ಥಾನಗಳಲ್ಲಿದ್ದಾರೆ.

ಸಾತ್ವಿಕ್‌, ಚಿರಾಗ್, ಅಶ್ವಿನಿ ಸಾಧನೆ: ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್‌ ಮತ್ತು ಚಿರಾಗ್ ಶೆಟ್ಟಿ 24ನೇ ಸ್ಥಾನದಲ್ಲಿದ್ದಾರೆ. ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಅವರಿಗೆ 27ನೇ ಸ್ಥಾನ. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 23ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.