ADVERTISEMENT

ಬ್ಯಾಡ್ಮಿಂಟನ್‌: ಸಿಂಧು, ಪ್ರಣೀತ್‌ ಶುಭಾರಂಭ

ಪಿಟಿಐ
Published 15 ಅಕ್ಟೋಬರ್ 2019, 19:45 IST
Last Updated 15 ಅಕ್ಟೋಬರ್ 2019, 19:45 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಒಡೆನ್ಸ್‌, ಡೆನ್ಮಾರ್ಕ್‌: ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌ ಅವರು ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಸಿಂಧು 22–20, 21–18 ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜುಂಗ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 38 ನಿಮಿಷ ನಡೆಯಿತು.

ಮುಂದಿನ ಸುತ್ತಿನಲ್ಲಿ ಸಿಂಧು, ದಕ್ಷಿಣ ಕೊರಿಯಾದ ಆ್ಯನ್‌ ಸೆ ಯಂಗ್‌ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿದ್ದ ಸಿಂಧುಗೆ ಮೊದಲ ಗೇಮ್‌ನಲ್ಲಿ ಗ್ರೆಗೋರಿಯಾ ಪ್ರಬಲ ಪೈಪೋಟಿ ಒಡ್ಡಿದರು. ರೋಚಕ ಘಟ್ಟದಲ್ಲಿ ಸತತ ಎರಡು ಪಾಯಿಂಟ್ಸ್‌ ಗಳಿಸಿದ ಸಿಂಧು ಗೇಮ್‌ ಜಯಿಸಿದರು.

ಎರಡನೇ ಗೇಮ್‌ನಲ್ಲೂ ಉಭಯ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ದ್ವಿತೀಯಾರ್ಧದಲ್ಲಿ ಮಿಂಚಿದ ಸಿಂಧು ಗೆಲುವಿನ ಸಿಹಿ ಸವಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಣೀತ್‌ 21–14, 21–17 ನೇರ ಗೇಮ್‌ಗಳಿಂದ ಚೀನಾದ ಲಿನ್‌ ಡಾನ್‌ಗೆ ಆಘಾತ ನೀಡಿದರು. ಈ ಹೋರಾಟ 35 ನಿಮಿಷಗಳಲ್ಲಿ ಮುಗಿಯಿತು.

ಪರುಪಳ್ಳಿ ಕಶ್ಯಪ್‌ 13–21, 12–21ರಲ್ಲಿ ಥಾಯ್ಲೆಂಡ್‌ನ ಸಿಟ್ಟಿಕೊಮ್‌ ಥಾಮಸಿನ್‌ ಎದುರು ಪರಾಭವಗೊಂಡರು.

ಇನ್ನೊಂದು ಪಂದ್ಯದಲ್ಲಿ ಸೌರಭ್‌ ವರ್ಮಾ 21–19, 11–21, 17–21ರಲ್ಲಿ ನೆದರ್ಲೆಂಡ್ಸ್‌ನ ಮಾರ್ಕ್‌ ಕ್ಯಾಲಿಜೌ ಎದುರು ಸೋತರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರೂ ಗೆಲುವಿನ ಮುನ್ನುಡಿ ಬರೆದರು.

ಥಾಯ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸಾತ್ವಿಕ್‌ ಮತ್ತು ಚಿರಾಗ್‌ 24–22, 21–11ರಲ್ಲಿ ದಕ್ಷಿಣ ಕೊರಿಯಾದ ಕಿಮ್‌ ಗಿ ಜುಂಗ್‌ ಮತ್ತು ಲೀ ಯೊಂಗ್‌ ಡೇ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.