
ಲಖನೌ: ಭಾರತದ ಉದಯೋನ್ಮುಖ ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ಉನ್ನತಿ ಹೂಡಾ ಅವರು ಶುಕ್ರವಾರ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಮಿಥುನ್ ಮಂಜುನಾಥ್ ಮತ್ತು ಕಿದಂಬಿ ಶ್ರೀಕಾಂತ್ ನಾಲ್ಕರ ಘಟ್ಟದ ಮುಖಾಮುಖಿಗೆ ವೇದಿಕೆಯನ್ನು ಸಜ್ಜುಗೊಳಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯೂ ಸೆಮಿಫೈನಲ್‌ಗೆ ಮುನ್ನಡೆಯಿತು.
ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತೆ ತನ್ವಿ ಕಾರ್ಟರ್ ಫೈನಲ್ ಹಣಾಹಣಿಯಲ್ಲಿ 21-13, 21-19ರಿಂದ ಹಾಂಗ್‌ಕಾಂಗ್‌ನ ಲೋ ಸಿನ್ ಯಾನ್ ಅವರನ್ನು ಹಿಮ್ಮೆಟ್ಟಿಸಿದರು. ಭಾರತದ ಆಟಗಾರ್ತಿ ಎರಡನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ನೊಝೊಮಿ ಒಕುಹಾರ (ಜಪಾನ್) ಅವರಿಗೆ ಸೋಲಿನ ಆಘಾತ ನೀಡಿದ್ದರು.
16 ವರ್ಷ ವಯಸ್ಸಿನ ತನ್ವಿ ಸೆಮಿಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಹಿನಾ ಅಕೇಚಿ ಅವರನ್ನು ಎದುರಿಸಲಿದ್ದಾರೆ. ಜಪಾನ್‌ನ ಅಕೇಚಿ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ 21-8, 21-15ರಿಂದ ಮೂರನೇ ಶ್ರೇಯಾಂಕದ ಸುಂಗ್ ಶುವೊ ಯುನ್ ಅವರನ್ನು ಸೋಲಿಸಿದರು.
18 ವರ್ಷ ವಯಸ್ಸಿನ ಉನ್ನತಿ 21-15, 13-21, 21-16ರ ಮೂರು ಗೇಮ್‌ಗಳ ರೋಚಕ ಹಣಾಹಣಿಯಲ್ಲಿ ಸ್ವದೇಶದ ರಕ್ಷಿತಾಶ್ರೀ ಸಂತೋಷ್ ಅವರನ್ನು ಸೋಲಿಸಿದರು. ಭಾರತದ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ನೆಸ್ಲಿಹಾನ್ ಅರಿನ್ ಅವರನ್ನು ಎದುರಿಸುವರು. ಟರ್ಕಿಯ ಅರಿನ್ 21-19, 13-21, 21-15ರಿಂದ ಆತಿಥೇಯ ದೇಶದ ಇಶಾರಾನಿ ಬರುವಾ ಅವರನ್ನು ಮಣಿಸಿದರು.
ಅನುಭವಿ ಶ್ರೀಕಾಂತ್ 21-14, 11-4ರಿಂದ ತಮ್ಮ ಸ್ನೇಹಿತ ಪ್ರಿಯಾಂಶು ರಾಜಾವತ್ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿದರೆ, ಮಿಥುನ್ 21-18, 21-13ರಿಂದ ಸ್ವದೇಶದ ಮನ್‌ರಾಜ್ ಸಿಂಗ್ ವಿರುದ್ಧ ಜಯ ಗಳಿಸಿದರು. ಪುರುಷರ ಸಿಂಗಲ್ಸ್‌ನ ಅಗ್ರ ಶ್ರೇಯಾಂಕದ ಜೇಸನ್ ತೆಹ್ (ಸಿಂಗಪುರ) 19-21, 21-12, 20-22ರಿಂದ ಹಾಂಗ್‌ಕಾಂಗ್‌ನ ಜೇಸನ್ ಗುಣವಾನ್ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಸ್ಥಾನ ಕಾಯ್ದಿಸಿದರು.
ಅಗ್ರ ಶ್ರೇಯಾಂಕದ ಗಾಯತ್ರಿ ಮತ್ತು ಟ್ರೀಸಾ ಜೋಡಿಯು ಕ್ವಾರ್ಟರ್ ಫೈನಲ್‌ನಲ್ಲಿ 21-15, 21-16ರಿಂದ ಐದನೇ ಶ್ರೇಯಾಂಕದ ಬೆಂಗಿಸು ಎರ್ಸೆಟಿನ್ ಮತ್ತು ನಾಜ್ಲಿಕನ್ ಇಂಸಿ ಸೋಲಿಸಿತು. ಟ್ರೀಸಾ ಅವರು ಹರಿಹರನ್ ಅಂಶಕರುಣನ್ ಅವರ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲೂ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.